ಶಾಲಾ ಬಸ್‌ಗಳ ವಿರುದ್ಧ ಬಂಟ್ವಾಳ ಪೊಲೀಸರ ಖಡಕ್ ಆ್ಯಕ್ಷನ್: ಒಂದೇ ದಿನ 20 ಪ್ರಕರಣ ದಾಖಲು!

(ನ್ಯೂಸ್‌ ಕಡಬ) newskadaba.com,  ಜೂ.10  ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿಯಮ ಉಲ್ಲಂಘಿಸುವ ಸ್ಕೂಲ್ ಬಸ್‌ಗಳ ವಿರುದ್ಧ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಂದೇ ದಿನದಲ್ಲಿ 20 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಬಂಟ್ವಾಳ ಟ್ರಾಫಿಕ್ ಎಸ್‌ಐ ಆದರ್ಶ್ ನೇತೃತ್ವದ ಪೊಲೀಸ್ ತಂಡವು ಬೆಳ್ಳಂಬೆಳಗ್ಗೆ 6 ಗಂಟೆಯಿಂದಲೇ ಬಿಸಿರೋಡ್ ಸರ್ಕಲ್ ಬಳಿ ಹೆದ್ದಾರಿಯಲ್ಲಿ ಖಾಸಗಿ ಸಂಸ್ಥೆಗಳ ಶಾಲಾ ಬಸ್‌ಗಳನ್ನು ತಡೆದು ತಪಾಸಣೆ ನಡೆಸಿತು. ಈ ವೇಳೆ ಸಮವಸ್ತ್ರ ಧರಿಸದ 6 ಚಾಲಕರು, ಆರ್‌ಟಿಒ ಮಿತಿಗಿಂತ ಹೆಚ್ಚು ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಿದ್ದ 4 ಬಸ್‌ಗಳು, ಫಿಟ್‌ನೆಸ್ ಪ್ರಮಾಣ ಪತ್ರದ ಅವಧಿ ಮುಗಿದಿದ್ದ 1 ಬಸ್ ಸೇರಿದಂತೆ ಅಗತ್ಯ ದಾಖಲೆಗಳಿಲ್ಲದ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಯಿತು.

ಕಿಟಕಿಗಳಿಗೆ ಸೇಫ್ಟಿ ಗ್ರಿಲ್ಸ್, ಜಿಪಿಎಸ್, ಸ್ಪೀಡ್ ಗವರ್ನರ್, ಸಿಸಿಟಿವಿ, ಅಟೆಂಡರ್ಸ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ಹೆವಿ ಲೈಸೆನ್ಸ್ ಸೇರಿದಂತೆ ಇಲಾಖೆಯ 12 ಪ್ರಮುಖ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿರುವ ಎಸ್‌ಐ ಆದರ್ಶ್, ಮಳೆಗಾಲದಲ್ಲಿ ಚಾಲಕರು ಜಾಗರೂಕತೆಯಿಂದ ಇರಬೇಕು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Scroll to Top