(ನ್ಯೂಸ್ ಕಡಬ) newskadaba.com ಜೂ. 10. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮಯೋಗಿ ಮನ್‍ಧನ್ ಯೋಜನೆ ಹಾಗೂ National Pension Scheme for the Traders and self Employed Persons (NPS-Traders) ಯೋಜನೆಗಳಡಿ 18 ರಿಂದ 40 ವರ್ಷದೊಳಗಿನ ಅಸಂಘಟಿತ ವಲಯದ ಕಾರ್ಮಿಕರು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ನೋಂದಾಯಿಸಬಹುದು.
ವಯಸ್ಸಿಗೆ ಅನುಗುಣವಾಗಿ ಮಾಸಿಕವಾಗಿ 55 ರೂ.ನಿಂದ 200 ರೂ. ವರೆಗೆ ವಂತಿಗೆ ಪಾವತಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ವತಿಯಿಂದ ಅಷ್ಟೇ ವಂತಿಗೆ ಪಾವತಿಸಿ ಬ್ಯಾಂಕ್ ಖಾತೆಯಲ್ಲಿ ಮೊತ್ತವನ್ನು ಸಂಗ್ರಹಿಸಲಾಗುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಮಾಸಿಕ ರೂ. 3000 ಪಿಂಚಣಿ ಸೌಲಭ್ಯ ಪಡೆಯಬಹುದು.
ಈ ಯೋಜನೆಯಡಿ ನರೇಗಾ ಕಾರ್ಮಿಕರು, ಎಸ್.ಹೆಚ್.ಜಿ ಸದಸ್ಯರು, ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಮಿಕರು, ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಮೀನುಗಾರರು, ಇನ್ನಿತರೆ ಅಸಂಘಟಿತ ವಲಯಗಳ ಕಾರ್ಮಿಕರು ಹಾಗೂ ವ್ಯಾಪಾರಿಗಳು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಹಾಗೂ ಮೊದಲ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಯಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಕಾರ್ಮಿಕ ಅಧಿಕಾರಿಯವರ ಕಛೇರಿ, ಕಾರ್ಮಿಕ ಭವನ, ಯೆಯ್ಯಾಡಿ, ಮಂಗಳೂರು ಅಥವಾ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರುಗಳ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಂಚಣಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಸೂಚನೆ









