(ನ್ಯೂಸ್ ಕಡಬ) newskadaba.com ಕೇರಳ, ಮೇ.21. ಅಪರಿಚಿತ ವೈರಸ್ ಸೋಂಕಿನಿಂದ ಬೆಚ್ಚಿಬಿದ್ದಿದ್ದ ಕೇರಳ ವೈದ್ಯಕೀಯ ಕ್ಷೇತ್ರವು ಕೊನೆಗೂ ಮಾರಕ ಸೋಂಕನ್ನು ಪತ್ತೆಹಚ್ಚಿದೆ.
ಕೇರಳದಲ್ಲಿ ಈಗಾಗಲೇ 16 ಕ್ಕಿಂತಲೂ ಅಧಿಕ ಜನರನ್ನು ಬಲಿ ಪಡೆದು ಇಡೀ ದೇಶವನ್ನೇ ತಲ್ಲಣಗೊಳಿಸಿರುವ ವೈರಾಣುವನ್ನು ‘ನಿಪಾಹ್’ ಎಂದು ಗುರುತಿಸಲಾಗಿದ್ದು, ಈ ಮಾರಕ ಸೋಂಕಿನ ಕುರಿತಂತೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸೇರಿದಂತೆ ಇಡೀ ವೈದ್ಯಕೀಯ ಲೋಕವೇ ಆತಂಕಕ್ಕೆ ಒಳಗಾಗಿದೆ. ನಿಪಾಹ್ ವೈರಾಣು1998 ರಲ್ಲೇ ಮಲೇಷಿಯಾದಲ್ಲಿ ಪತ್ತೆಯಾಗಿದ್ದರೂ, ಈ ಸೋಂಕಿಗೆ ಇದುವರೆಗೆ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂಬುದು ಆತಂಕಕ್ಕೆ ಮೂಲ ಕಾರಣವಾಗಿದೆ. ಮಾರಣಾಂತಿಕ ಕಾಯಿಲೆಗಳನ್ನು ತರಬಲ್ಲ ನಿಪಾಹ್ ವೈರಾಣುವಿಗೆ ಲಸಿಕೆ ತಯಾರಿಸಲು ಸಾಕಷ್ಟು ವೈದ್ಯಕೀಯ ಸಂಸ್ಥೆಗಳು ಸಂಶೋಧನೆ ನಡೆಸುತ್ತಿವೆಯಾದರೂ ಲಸಿಕೆ ಮಾತ್ರ ಇನ್ನೂ ಕಂಡುಹಿಡಿಯಲಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ ಎನ್ನಲಾಗಿದೆ. ದಿನದಿಂದ ದಿನಕ್ಕೆ ಹರಡುತ್ತಿರುವ ಈ ಮಾರಕ ಸೋಂಕಿಗೆ ಹಲವರು ತುತ್ತಾಗಿದ್ದು, ಕೇರಳದಾದ್ಯಂತ ನಾಗರೀಕರನ್ನು ಬೆಚ್ಚಿ ಬೀಳಿಸಿವೆ.