(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 06. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಕಲಚೇತನರಿಗೆ ವಿಕಲಚೇತನರ ಮೂಲಕವೇ ಅವರು ವಾಸಿಸುವ ವ್ಯಾಪ್ತಿಯಲ್ಲಿ ಶೈಕ್ಷಣಿಕ ಉದ್ಯೋಗ ತರಬೇತಿ, ಆರ್ಥಿಕ ಪುನರ್ವಸತಿ ಮತ್ತು ಸಾಮಾಜಿಕ ಭದ್ರತೆ ಸೌಲಭ್ಯವನ್ನು ಕಲ್ಪಿಸುವ ದೃಷ್ಠಿಯಿಂದ ಪುನರ್ವಸತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡುವ ಸಲುವಾಗಿ ಸುಳ್ಯ ತಾಲೂಕಿನ ಅಲೆಟ್ಟಿ, ಬೆಳ್ತಂಗಡಿ ತಾಲೂಕಿನ ತೆಕ್ಕಾರು ಹಾಗೂ ಕಡಬ ತಾಲೂಕಿನ ಸವಣೂರು ಮತ್ತು ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿಕಲಚೇತನರಾಗಿರಬೇಕು. (ಸ್ಥಳೀಯರಾಗಿರಬೇಕು– ಈ ಬಗ್ಗೆ ಸ್ಥಳೀಯ ಪಂಚಾಯಿತಿಯಿಂದ ಧೃಡೀಕರಣ ಸಲ್ಲಿಸಬೇಕು). ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿದ್ದು, ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 18-45 ವರ್ಷದ ಒಳಗಿರಬೇಕು ಮತ್ತು ಪುನಶ್ಚೇತನ ಸೇವೆ ಸಲ್ಲಿಸಲು ಆಸಕ್ತಿ ಇರಬೇಕು. ವಿಕಲಚೇತನರಾಗಿಬೇಕು, ವಿಕಲತೆಯು ಕನಿಷ್ಠ ಶೇ.40 ರಷ್ಟಿರಬೇಕು. ಅಂಗವಿಕಲತೆಯ ಬಗ್ಗೆ ವಿಶಿಷ್ಟ ಗುರುತಿನ ಚೀಟಿಯನ್ನು (ಯು.ಡಿ.ಐ.ಡಿ) ಹೊಂದಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 30.
ಅರ್ಜಿ ನಮೂನೆಯನ್ನು ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕು ಪಂಚಾಯತ್ ಕಛೇರಿಯಲ್ಲಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಅಥವಾ ಅರ್ಜಿ ನಮೂನೆಗಳಿಗಾಗಿ (ದೂ.ಸಂ:0824-2455999) ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









