(ನ್ಯೂಸ್ ಕಡಬ) com, ಜೂ.05: ಭಾರತೀಯ ವಾಯುಪಡೆಯ ಅತ್ಯಂತ ಅನುಭವಿ ಮತ್ತು ಗೌರವಾನ್ವಿತ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರನ್ನು ಜುಲೈ 1ರಿಂದ ಜಾರಿಗೆ ಬರುವಂತೆ ಅವರನ್ನು ವಾಯುಪಡೆಯ ಮುಂದಿನ ಉಪ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಜುಲೈ 1ರಿಂದ ಅವರು ಈ ನೂತನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅವರು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್‌ನ ಪ್ರಧಾನ ಕಚೇರಿಯಲ್ಲಿ ಚೀಫ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಶುತೋಷ್ ದೀಕ್ಷಿತ್ ಅವರು ಡಿಸೆಂಬರ್ 6, 1986ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ಅಧಿಕೃತವಾಗಿ ನಿಯೋಜನೆಗೊಂಡರು. ಅವರು ಅರ್ಹ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್ ಮತ್ತು ಎಕ್ಸ್‌ಪೆರಿಮೆಂಟಲ್ ಟೆಸ್ಟ್ ಪೈಲಟ್ ಆಗಿದ್ದು, ಮಿರಾಜ್-2000, ಮಿಗ್-21 ಮತ್ತು ಜಾಗ್ವಾರ್ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಮಾದರಿಯ ವಿಮಾನಗಳಲ್ಲಿ 3,300ಕ್ಕೂ ಹೆಚ್ಚು ಗಂಟೆಗಳ ಹಾರಾಟದ ಅಪಾರ ಅನುಭವವನ್ನು ಹೊಂದಿದ್ದಾರೆ.
ಅಶುತೋಷ್ ದೀಕ್ಷಿತ್ ಅವರು ಕೇವಲ ಕಮಾಂಡರ್ ಮಾತ್ರವಲ್ಲದೆ, ಅತ್ಯುತ್ತಮ ತರಬೇತುದಾರ ಮತ್ತು ಟೆಸ್ಟ್ ಪೈಲಟ್ ಆಗಿದ್ದಾರೆ. ಅವರು ದಕ್ಷಿಣ ವಲಯದ ಪ್ರಮುಖ ಫೈಟರ್ ಟ್ರೈನಿಂಗ್ ಬೇಸ್‌ನ ಕಮಾಂಡರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರ ಅತ್ಯುತ್ತಮ ನಾಯಕತ್ವದ ಪರಿಣಾಮವಾಗಿ ಆ ಬೇಸ್ ಇಡೀ ಕಮಾಂಡ್‌ನಲ್ಲೇ ಅತ್ಯುತ್ತಮ ಬೇಸ್ ಎಂಬ ಹೆಗ್ಗಳಿಕೆ ಗಳಿಸಿತ್ತು.









