(ನ್ಯೂಸ್ ಕಡಬ) newskadaba.com ಜೂ. 05. ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ತಮಿಳುನಾಡಿನ ರಾಜಕೀಯ ದಿಕ್ಕು ಮತ್ತು ಪಕ್ಷದ ಕಾರ್ಯತಂತ್ರದ ಕುರಿತು ಪಕ್ಷದ ನಾಯಕತ್ವದೊಂದಿಗೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳೇ ತಮ್ಮ ನಿರ್ಧಾರಕ್ಕೆ ಕಾರಣ ಎಂದು ಹೇಳಿದ್ದಾರೆ.
ಈ ಕುರಿತು ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಅವರು, ಪಕ್ಷಕ್ಕೆ ಹೊರೆಯಾಗಲು ಅಥವಾ ತೊಂದರೆ ಉಂಟುಮಾಡಲು ಬಯಸದ ಕಾರಣ ಬಿಜೆಪಿಯಿಂದ ಹೊರಬರುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ತಮಿಳುನಾಡಿನ ಕುರಿತ ನನ್ನ ಅಭಿಪ್ರಾಯಗಳು ಪಕ್ಷದ ನಾಯಕತ್ವದ ನಿಲುವಿನೊಂದಿಗೆ ಹೊಂದಿಕೆಯಾಗಲಿಲ್ಲ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪಕ್ಷದ ಉನ್ನತ ನಾಯಕತ್ವದೊಂದಿಗೆ ಹಲವು ಬಾರಿ ಚರ್ಚೆ ನಡೆಸಿದ್ದೆ. ಆದರೆ, ಯಾವುದೇ ಒಮ್ಮತ ಮೂಡಲಿಲ್ಲ ಎಂದು ಅಣ್ಣಾಮಲೈ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಇದರೊಂದಿಗೆ ಹಿರಿಯ ನಟ ರಜನೀಕಾಂತ್ ಅವರು ತಮ್ಮೊಂದಿಗೆ ಸೇರಿಕೊಳ್ಳುವಂತೆ ಮನವಿ ಮಾಡಿದ್ದರು ಎಂದು ತಿಳಿಸಿರುವ ಅಣ್ಣಾಮಲೈ, ತಾವು ಯಾವುದೇ ಪಕ್ಷವನ್ನು ಸೇರುವ ಉದ್ದೇಶ ಹೊಂದಿಲ್ಲ, ಸ್ವಂತ ರಾಜಕೀಯ ಚಳುವಳಿಯನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ.










