ಕಾಸರಗೋಡು : 180 ಪಕ್ಷಿಗಳನ್ನು ಗುರುತಿಸಿ ಬಾನಾಡಿಗಳ ಬಗ್ಗೆ ಕೃತಿ ರಚಿಸಿದ 7ನೇ ತರಗತಿ ಬಾಲಕಿ!



(ನ್ಯೂಸ್‌ ಕಡಬ) newskadaba.com,  ಮೇ.07:  ಇಂದಿನ ಮಕ್ಕಳಲ್ಲಿ ಮೊಬೈಲ್ ಮತ್ತು ವಿಡಿಯೋ ಗೇಮ್‌ಗಳ ಆಸಕ್ತಿ ಹೆಚ್ಚುತ್ತಿರುವ ಕಾಲದಲ್ಲಿ, ಗಡಿನಾಡಿನ ಪುಟಾಣಿ ಬಾಲಕಿಯೊಬ್ಬಳು ಪ್ರಕೃತಿ ಮತ್ತು ಪಕ್ಷಿ ಲೋಕದತ್ತ ಅಪರೂಪದ ಆಸಕ್ತಿ ಬೆಳೆಸಿ ರಾಜ್ಯದ ಗಮನ ಸೆಳೆದಿದ್ದಾಳೆ. ಕೇವಲ ಐದನೇ ತರಗತಿಯಿಂದ ಏಳನೇ ತರಗತಿ ತನಕದ ಮೂರು ವರ್ಷದ ಅವಧಿಯಲ್ಲಿ 180ಕ್ಕೂ ಹೆಚ್ಚು ಪಕ್ಷಿಗಳನ್ನು ಸ್ವತಂತ್ರವಾಗಿ ಗುರುತಿಸಿ, ಅವುಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ವಿಶೇಷ ಕೃತಿ ರಚಿಸಿರುವ ಸಾಧನೆ ಮಾಡಿದ್ದಾಳೆ ಕು. ನೆಹಾರಿಕಾ.







 

“Birds, the Hidden World In Our Campus” ಎಂಬ ಹೆಸರಿನ ಈ ಕೃತಿ ಈಗಾಗಲೇ ಸಾಂಕೇತಿಕವಾಗಿ ಬಿಡುಗಡೆಯಾಗಿದ್ದು, ಕೇರಳ ರಾಜ್ಯದ ಗಮನ ಸೆಳೆದಿದೆ. ಆದರೆ ಈ ಅಪರೂಪದ ಪರಿಸರ ಅಧ್ಯಯನ ಕೃತಿ ಅಧಿಕೃತವಾಗಿ ಮುದ್ರಣಗೊಂಡು ರಾಜ್ಯಮಟ್ಟದಲ್ಲಿ ಬಿಡುಗಡೆಯಾಗಬೇಕೆಂಬುದು ಬಾಲಕಿ ನೆಹಾರಿಕಾಳ ದೊಡ್ಡ ಕನಸಾಗಿದೆ.






ಕಾಸರಗೋಡು ಜಿಲ್ಲೆಯ ಬೇಳ ಧರ್ಬೆತ್ತಡ್ಕ ನಿವಾಸಿಯಾಗಿರುವ ನೆಹಾರಿಕಾ, ಕೃಷಿಕ ಗೋಪಾಲಕೃಷ್ಣ ಮತ್ತು ಶಿಕ್ಷಕಿ ಆಶಾಕಿರಣ ದಂಪತಿಯ ಪುತ್ರಿ. ಮಳೆ, ಬಿಸಿಲು, ಚಳಿ ಎನ್ನದೆ ಕ್ಯಾಮರಾ ಹೊತ್ತು ಗುಡ್ಡ-ಗಾಡು ಸುತ್ತುತ್ತಾ ಪಕ್ಷಿಗಳ ಫೋಟೋ ಸೆರೆಹಿಡಿದು, ಅವುಗಳ ಜೀವನಶೈಲಿ ಮತ್ತು ವೈಶಿಷ್ಟ್ಯಗಳನ್ನು ದಾಖಲಿಸುವುದು ಈಕೆಯ ಹವ್ಯಾಸವಾಗಿದೆ.ಬೇಳ ಸಂತ ಬಾರ್ತಲೋಮಯ ಹಿರಿಯ ಬುನಾದಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಪಠ್ಯದಲ್ಲಿದ್ದ ಪಕ್ಷಿ ವೀಕ್ಷಣೆಯ ಪಾಠ ಈಕೆಯ ಆಸಕ್ತಿಗೆ ಕಾರಣವಾಯಿತು. ಕ್ಲಾಸ್ ಟೀಚರ್ ಬನಶಂಕರಿ ಅವರ ಪ್ರೋತ್ಸಾಹ ಮತ್ತು ಪಕ್ಷಿ ಪ್ರೇಮಿ ರಾಜು ಕಿದೂರು ನಡೆಸಿದ ಪರಿಸರ ಜಾಗೃತಿ ತರಗತಿ ನೆಹಾರಿಕಾಳಿಗೆ ಹೊಸ ದಿಕ್ಕು ತೋರಿಸಿತು. ಬಳಿಕ ರಾಜು ಕಿದೂರು ಅವರ ಮಾರ್ಗದರ್ಶನದಲ್ಲಿ ಪಕ್ಷಿ ವೀಕ್ಷಣೆಯನ್ನು ಗಂಭೀರವಾಗಿ ಆರಂಭಿಸಿದಳು.

ಮಗಳ ಆಸಕ್ತಿ ಗಮನಿಸಿದ ಪೋಷಕರು ಆಕೆಗೆ ಎಸ್‌ಎಲ್‌ಆರ್ ಕ್ಯಾಮರಾವನ್ನು ಕೊಟ್ಟರು. ಕೇವಲ ಮೂರು ವರ್ಷಗಳಲ್ಲಿ ಶಾಲೆಯ ಆರು ಎಕರೆ ಪರಿಸರದಲ್ಲೇ 84ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಗುರುತಿಸಿದ ನೆಹಾರಿಕಾ, ಬಳಿಕ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಿ ಒಟ್ಟು 180 ಪಕ್ಷಿಗಳ ಮಾಹಿತಿ ಸಂಗ್ರಹಿಸಿದ್ದಾಳೆ.ಈ ಕೃತಿಯಲ್ಲಿ ಪಕ್ಷಿಗಳ ಪ್ರಾದೇಶಿಕ ಹೆಸರು, ವೈಜ್ಞಾನಿಕ ಹೆಸರು, ವೈಶಿಷ್ಟ್ಯ ಹಾಗೂ ಚಿತ್ರಗಳನ್ನು ಒಳಗೊಂಡಿರುವ ವಿಶೇಷ ಕಾಫಿ ಟೇಬಲ್ ಬುಕ್ ರೂಪಿಸಲಾಗಿದೆ. ಇದು ಬಹುವರ್ಣ ಮುದ್ರಣದಲ್ಲಿ ಪ್ರಕಟವಾದರೆ ಶಾಲಾ ಮಕ್ಕಳಿಗೆ ಉಪಯುಕ್ತ ಕೈಪಿಡಿಯಾಗುವುದಲ್ಲದೆ, ಪರಿಸರ ಮತ್ತು ಜೀವ ವೈವಿಧ್ಯ ಅಧ್ಯಯನಕ್ಕೂ ಮಹತ್ವದ ಆಕರವಾಗಲಿದೆ ಎಂದು ಪರಿಸರಾಸಕ್ತರು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯೊಬ್ಬಳು ಪಠ್ಯದಿಂದ ಪ್ರೇರಣೆ ಪಡೆದು ಪಕ್ಷಿ ನಿರೀಕ್ಷಕಿಯಾಗಿರುವುದು ಕಾಸರಗೋಡಿನಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ಅದೇ ರೀತಿ 180 ಪಕ್ಷಿ ಪ್ರಭೇದಗಳನ್ನು ದಾಖಲಿಸಿ ಕೃತಿ ರಚಿಸಿರುವುದು ರಾಜ್ಯದಲ್ಲೇ ಅಪರೂಪದ ಸಾಧನೆ.ತಾನು ಓದುತ್ತಿರುವ ಶಾಲೆಯಿಂದ ಏಳನೇ ತರಗತಿ ಮುಗಿಸುವ ಮುನ್ನವೇ ಈ ಕೃತಿ ಅಧಿಕೃತವಾಗಿ ಪ್ರಕಟವಾಗಿ ನಾಡಿಗೆ ಸಮರ್ಪಣೆಯಾಗಬೇಕು ಎಂಬುದು ನೆಹಾರಿಕಾಳ ಆಸೆ. ಈ ಪ್ರತಿಭಾವಂತ ಬಾಲಕಿಯ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಪ್ರೋತ್ಸಾಹ ನೀಡಬೇಕು ಎಂಬ ಒತ್ತಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

error: Content is protected !!
Scroll to Top