(ನ್ಯೂಸ್ ಕಡಬ) newskadaba.com ಜು. 23. ಕಡಬ ಸಮುದಾಯ ಆರೋಗ್ಯ ಕೇಂದ್ರವನ್ನು ಸಮಗ್ರವಾಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ 5 ಕೋಟಿ ಅನುದಾನಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.
ಅವರು ಮಂಗಳವಾರದಂದು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಡಯಾಲಿಸಿಸ್ ಕೇಂದ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ಬಳಿಕ ಮಾತನಾಡಿದರು.
ನಮ್ಮ ಜಿಲ್ಲೆಯವರಾದ ಹಾಗೂ ಕಡಬದೊಂದಿಗೆ ವಿಶೇಷ ಬಾಂಧವ್ಯ ಹೊಂದಿರುವ ಯು.ಟಿ. ಖಾದರ್ ಅವರು ಈ ಹಿಂದೆ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದು ಕಡಬದ ಮೇಲೆ ಅವರಿಗೆ ವಿಶೇಷ ಕಾಳಜಿ ಇದೆ. ಅವರ ಮುಖಾಂತರ ಸರ್ಕಾರದಿಂದ 5 ಕೋಟಿ ವಿಶೇಷ ಅನುದಾನ ತಂದು ಸಮುದಾಯ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಕಡಬ ತಾಲೂಕಾಗಿ ಪರಿವರ್ತನೆಯಾಗಿದ್ದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಲ್ಲ ಎಂಬ ಕೊರಗು ಸಾರ್ವಜನಿಕರಲ್ಲಿದೆ. ನಾನು ಶಾಸಕಿಯಾದಂದಿನಿಂದ ಈ ಕುರಿತು ಸರ್ಕಾರದ ಗಮನ ಸೆಳೆದಿದ್ದೇನೆ, ಮನವಿಗಳನ್ನು ಸಲ್ಲಿಸಿದ್ದೇನೆ. ಅಲ್ಲದೇ ವಿಧಾನಸಭೆ ಅಧಿವೇಶನದಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದಿದ್ದೇನೆ. ಈ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿಲ್ಲುವುದಿಲ್ಲ ಎಂದು ಭರವಸೆ ನೀಡಿದರು.
ಆಸ್ಪತ್ರೆಯ ಮೂಲ ಸೌಕರ್ಯದ ಬಗ್ಗೆ ಮಾತನಾಡಿದ ಶಾಸಕರು, ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ನಡೆಸಲು ಕೊಠಡಿಯ ಅಭಾವವಿದೆ. ಪ್ರಸ್ತುತ ಸಭೆ ನಡೆಸುವ ಹಾಲ್ ನಲ್ಲೇ ಡಯಾಲಿಸಿಸ್ ಕೇಂದ್ರ ನಡೆಯುತ್ತಿರುವುದರಿಂದ ಅಲ್ಲಿ ಸಭೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರ್ಯಾಯವಾಗಿ ಆಸ್ಪತ್ರೆಯ ಆವರಣದಲ್ಲಿರುವ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಅಲ್ಲಿ 72 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಇನ್ಫೋಸಿಸ್ (Infosys) ಅಥವಾ ಎಂಆರ್‌ಪಿಎಲ್ (MRPL) ಸಂಸ್ಥೆಗಳ CSR ನಿಧಿಯಿಂದ ವಿಶೇಷ ಅನುದಾನ ತಂದು ಹೊಸ ಕಟ್ಟಡ ನಿರ್ಮಿಸಲಾಗುವುದು. ಅಲ್ಲಿಗೆ ಡಯಾಲಿಸಿಸ್ ಕೇಂದ್ರವನ್ನು ಸ್ಥಳಾಂತರಿಸಲಾಗುವುದು. ಈಗಾಗಲೇ ಹಳೆಯ ಕಟ್ಟಡ ತೆರವಿಗೆ ಸೂಚನೆ ನೀಡಲಾಗಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್, ದಂತ ವೈದ್ಯೆ ಡಾ. ಪದ್ಮಶ್ರೀ ಪುತ್ರನ್, ಆಯುಷ್ ವೈದ್ಯೆ ಡಾ. ಅಶ್ವಧಿ ಮರಿಯ ಜಾರ್ಜ್, ಸೂಪರಿಂಟೆಂಡೆಂಟ್ ಸುನಿಲ್, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಾದ ಪರಮೇಶ್ವರ ಪಿ., ಪೂವಯ್ಯ ಸೇರಿದಂತೆ ಬಿಜೆಪಿಯ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.









