ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ ಡಿಕ್ಕಿಯಾದ ಬೆನ್ನಲ್ಲೇ ಹೊತ್ತಿ ಉರಿದ ವಾಹನಗಳು



(ನ್ಯೂಸ್‌ ಕಡಬ) newskadaba.com,ಜ.22  ಅಮರಾವತಿ: ಟಯರ್ ಸ್ಫೋಟಗೊಂಡು ನಿಯಂತ್ರಣ ಕಳೆದುಕೊಂಡ ಬಸ್ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದು ಧಗಧಗನೆ ಹೊತ್ತಿ ಉರಿದ ಪರಿಣಾಮ ಮೂವರು ಸಜೀವ ದಹನವಾದ ಘಟನೆ ಗುರುವಾರ ಆಂಧ್ರದ ನಂದ್ಯಾಲ್ ಜಿಲ್ಲೆಯಲ್ಲಿ ನಡೆದಿದೆ.ಗುರುವಾರ ನಸುಕಿನ ಜಾವ 1:30 ರ ಸುಮಾರಿಗೆ ಸಂಭವಿಸಿದ್ದು, ದುರಂತದಲ್ಲಿ ಬಸ್ ಚಾಲಕ, ಕಂಟೈನರ್ ಚಾಲಕ ಹಾಗೂ ಲಾರಿ ಕ್ಲೀನರ್ ಸೇರಿ ಮೂವರು ಸಾವನ್ನಪ್ಪಿದ್ದಾರೆ.





ಅಪಘಾತಕ್ಕೀಡಾದ ಖಾಸಗಿ ಬಸ್ ಆಂಧ್ರದ ನೆಲ್ಲೂರಿನಿಂದ ಹೈದರಾಬಾದ್‌ಗೆ ತೆರಳುತ್ತಿತ್ತು. ಈ ವೇಳೆ ಬಲಭಾಗದ ಟೈಯರ್ ಸ್ಫೋಟಗೊಂಡಿದೆ. ದಿಢೀರ್ ಸ್ಫೋಟದಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಹಾರಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್‌ಗಳನ್ನ ಸಾಗಿಸುತ್ತಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ.






ಈ ದುರಂತದಲ್ಲಿ ಬಸ್ ಮತ್ತು ಕಂಟೈನರ್ ಎರಡೂ ಹೊತ್ತಿ ಬೆಂಕಿಗಾಹುತಿಯಾಗಿವೆ. ಬೆಂಕಿ ಕೆನ್ನಾಲಿಗೆ ವ್ಯಾಪಿಸುತ್ತಿದ್ದಂತೆ ಬಸ್ ಡ್ರೈವರ್, ಕಂಡಕ್ಟರ್ ಕಿಟಕಿ ಗಾಜುಗಳನ್ನ ಒಡೆದು ಪ್ರಯಾಣಿಕರನ್ನ ರಕ್ಷಿಸಲು ಮುಂದಾಗಿದ್ದಾರೆ. ಸ್ಥಳೀಯ ನಿವಾಸಿಗಳೂ ನೆರವಿಗೆ ಧಾವಿಸಿದ್ದಾರೆ. ಕೂಡಲೇ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಆದರೆ ಅದಾಗಲೇ ಬಸ್, ಕಂಟೈನರ್‌ನಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿದ್ದವು.ಮೂವರು ಸಾವನ್ನಪ್ಪಿದ್ದು ಉಳಿದ 36 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟೈರ್ ಸಿಡಿದ ಬಳಿಕ ಬಸ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ, ಬಳಿಕ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ…

error: Content is protected !!
Scroll to Top