(ನ್ಯೂಸ್ ಕಡಬ) newskadaba.com,ಡಿ.29 ಹೈದರಾಬಾದ್: ವಿಶಾಖಪಟ್ಟಣಂ-ದುವ್ವಾಡ ಮೂಲಕ ಎರ್ನಾಕುಲಂಗೆ ಹೋಗುತ್ತಿದ್ದ ಟಾಟಾನಗರ್-ಎರ್ನಾಕುಲಂ ಎಕ್ಸ್ಪ್ರೆಸ್ ರೈಲಿನ 2 ಭೋಗಿಗಳಿಗೆ ಅಗ್ನಿ ಹೊತ್ತಿಕೊಂಡ ಪರಿಣಾಮ ಒಬ್ಬಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರೈಲು ಬೆಂಕಿ ಹೊತ್ತಿಕೊಂಡಾಗ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಹಾಗೂ ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ 12:45 ರ ಸುಮಾರಿಗೆ ಈ ಬೆಂಕಿ ದುರಂತ ಘಟನೆ ನಡೆದಿದೆ..
ರೈಲಿನ ಪ್ಯಾಂಟ್ರಿ ಕಾರಿನ ಪಕ್ಕದಲ್ಲಿರುವ ಬಿ1 ಮತ್ತು ಎಂ2 ಎಸಿ ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಲೋಕೋ ಪೈಲಟ್‌ಗಳು ಎಲಮಂಚಿಲಿ ಸಮೀಪದ ರೈಲ್ವೆ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿಗೆ ಕೂಡಲೇ ಮಾಹಿತಿ ನೀಡಲಾಯಿತು. ರಕ್ಷಣಾ ಸಿಬ್ಬಂದಿ ಅಲ್ಲಿಗೆ ತಲುಪುವ ಹೊತ್ತಿಗೆ 2 ಬೋಗಿಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದವು. ಅನಕಪಲ್ಲಿ, ಎಲಮಂಚಿಲಿ ಮತ್ತು ನಕ್ಕಪಲ್ಲಿಯಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದರು.
ಬಿ1 ಬೋಗಿಯಲ್ಲಿದ್ದ ಒಬ್ಬ ವ್ಯಕ್ತಿ ಸಜೀವ ದಹನವಾಗಿದ್ದಾನೆ. ಮೃತರನ್ನು ವಿಶಾಖಪಟ್ಟಣದ ಚಂದ್ರಶೇಖರ್ ಸುಂದರ್ (70) ಎಂದು ಗುರುತಿಸಲಾಗಿದೆ. ಇತರ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸುಮಾರು 2 ಡಜನ್ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸುಮಾರು 2,000 ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಸಿಲುಕಿದ್ದರು. ಈ ಘಟನೆಯಿಂದಾಗಿ ವಿಶಾಖಪಟ್ಟಣಂ-ವಿಜಯವಾಡ ಮಾರ್ಗದಲ್ಲಿ ಹಲವಾರು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೆಳಗಿನ ಜಾವ 3.30 ರ ಬಳಿಕ ಪ್ರಯಾಣಿಕರನ್ನು ಬೇರೆ ರೈಲಿನಲ್ಲಿ ಸಾಗಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.









