ಗೃಹಲಕ್ಷ್ಮೀ ಯೋಜನೆ ಹಣ ಬಾಕಿ ಇದ್ರೆ ಕೂಡಲೇ ಬಿಡುಗಡೆ: ಸಿಎಂ ಸಿದ್ದರಾಮಯ್ಯ ಭರವಸೆ



(ನ್ಯೂಸ್‌ ಕಡಬ) newskadaba.com,  ಡಿ.13 ವಿಧಾನಸಭೆ : ಗೃಹಲಕ್ಷ್ಮೀ ಹಣವನ್ನು ಆಗಸ್ಟ್‌ ತಿಂಗಳವರೆಗೆ ನೀಡಲಾಗಿದೆ. ಒಂದು ವೇಳೆ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಫಲಾನುಭವಿಗಳ ಖಾತೆಗಳಿಗೆ ಹೋಗಿಲ್ಲ ಎನ್ನುವುದಾದರೆ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಲ್ಲದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ.





ಪ್ರಶ್ನೋತ್ತರ ಅವಧಿ ಬಳಿಕ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಈ ವಿಷಯ ಪ್ರಸ್ತಾಪಿಸಿದರು. ಆಗ ಸಿದ್ದರಾಮಯ್ಯ, ಹೆಬ್ಬಾಳ್ಕರ್‌ ಸದನದಲ್ಲಿ ಉಪಸ್ಥಿತರಿಲ್ಲ. ಆಗಸ್ಟ್‌ವರೆಗೆ ಎಲ್ಲಾ ಹಣ ಪಾವತಿ ಮಾಡಲಾಗಿದೆ. ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ಹಣವನ್ನು ಸದ್ಯದಲ್ಲೇ ಪಾವತಿಸಲಾಗುವುದು. ಫೆಬ್ರವರಿ, ಮಾರ್ಚ್‌ ತಿಂಗಳ ಹಣ ನೀಡಿಲ್ಲ ಎಂದಾದರೆ ಕೂಡಲೇ ಬಿಡುಗಡೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.






ಲಕ್ಷ್ಮೀ ಹೆಬ್ಬಾಳ್ಕರ್‌ ಸದನಕ್ಕೆ ಸುಳ್ಳು ಹೇಳಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆರ್‌.ಅಶೋಕ್‌ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧಪಕ್ಷದವರು ಇರುವುದೇ ಸುಳ್ಳು ಹೇಳೋಕೆ ಎಂದು ನೀವೇ ಹೇಳಿದ್ದೀರಿ. ಹಾಗಾದರೆ ನೀವು ಹೇಳೋದೆಲ್ಲವೂ ಸುಳ್ಳು ಎಂದು ತಾನೇ ಎಂದು ಪ್ರಶ್ನಿಸಿದರು. ಇದಕ್ಕೆ ಅಶೋಕ್‌, ನಾವು ಮಾತ್ರ ಎಂದು ಹೇಳಿಲ್ಲ. ವಿರೋಧಪಕ್ಷದಲ್ಲಿ ಕೂರುವವರೆಲ್ಲರೂ ಸುಳ್ಳು ಹೇಳುತ್ತಾರೆ ಎಂದು ನಿಮ್ಮನ್ನೂ ಸೇರಿಸಿ ಹೇಳಿದ್ದೇನೆ ಎಂದು ಸಮಜಾಯಿಷಿ ನೀಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ, ನಾನು ವಿರೋಧಪಕ್ಷದಲ್ಲಿದ್ದಾಗ ಎಂದೂ ಸುಳ್ಳು ಹೇಳಿಲ್ಲ ಎಂದು ತಿರುಗೇಟು ನೀಡಿದರು.

error: Content is protected !!
Scroll to Top