ಅಲ್ಯುಮಿನಿಯಂ ಪಾತ್ರೆ ಬಳಕೆ ನಿಷೇಧಕ್ಕೆ ಮುಂದಾದ ರಾಜ್ಯ ಸರಕಾರ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 13. ರಾಜ್ಯದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಬಳಸಲಾಗುತ್ತಿರುವ ಅಲ್ಯುಮಿನಿಯಂ ಪಾತ್ರೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ದೃಢ ನಿರ್ಧಾರಕ್ಕೆ ಹೆಜ್ಜೆಯಿಟ್ಟಿದ್ದು, ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಅಲ್ಯುಮಿನಿಯಂ ಪಾತ್ರೆಗಳ ಬಳಕೆಗೆ ಕಡಿವಾಣ ಹಾಕಿದೆ.

ರಾಜ್ಯದ 9,337 ಶಾಲೆಗಳ ಅಡುಗೆ ಮನೆಗೆ ಆಧುನಿಕ ಅಡುಗೆ ಪರಿಕರಗಳನ್ನು ಕೊಂಡುಕೊಳ್ಳಲು 21.55 ಕೋಟಿ ರೂ. ಅನುದಾನ ನೀಡಲು ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು, ಅಲ್ಯುಮಿನಿಯಂ ಪಾತ್ರೆ ಕೊಂಡುಕೊಳ್ಳಬಾರದು ಎಂದು ಸೂಚಿಸಿದೆ.

ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಶಾಲೆಗಳಲ್ಲಿ ಆಹಾರವನ್ನು ತಯಾರಿಸುವಾಗ ಅಲ್ಯುಮಿನಿಯಂ ಪಾತ್ರೆಗಳನ್ನು ದೀರ್ಘಾವಧಿಯಲ್ಲಿ ಬಳಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಅಲ್ಯುಮಿನಿಯಂ ಪಾತ್ರೆಗಳ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಕೇಂದ್ರ ಸರಕಾರ ಸೂಚಿಸಿತ್ತು.

ಅದರಂತೆ ಶಾಲೆಗಳಲ್ಲಿ ಕಡ್ಡಾಯವಾಗಿ ಗುಣಮಟ್ಟದಿಂದ ಕೂಡಿರುವ ಉತ್ತಮವಾದ ಸ್ಟೈನ್‌ಲೆಸ್‌ ಸ್ಟೀಲ್‌ ಪಾತ್ರೆ ಪರಿಕರವನ್ನು ಮಾತ್ರ ಕೊಂಡುಕೊಳ್ಳಬೇಕು ಎಂದು ಸೂಚಿಸಲಾಗಿದೆ.

Scroll to Top