(ನ್ಯೂಸ್ ಕಡಬ) newskadaba.com, ಸೆ. 30 ಬೆಂಗಳೂರು: ಈ ಬಾರಿ ಮೈಸೂರು ದಸರಾ ನೋಡಲೆಂದು ಹೊರಟವರಿಗೆ ಕೆಎಸ್‌ಆರ್‌ಟಿಸಿ ಶಾಕ್ ನೀಡಿದೆ. ಬೆಂಗಳೂರು- ಮೈಸೂರು ಬಸ್ ಟಿಕೆಟ್ ದರ ಹೆಚ್ಚಳವಾಗಿದೆ. ಸಾಲು ಸಾಲಾಗಿ ರಜೆಗಳು ಬಂದಿರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಟಿಕೆಟ್ ಬೇಡಿಕೆ ಹತ್ತು ಪಟ್ಟು ಹೆಚ್ಚಿದೆ. ಹೀಗಾಗಿ ಕೆಎಸ್ಆರ್ಟಿಸಿ ಮಾತ್ರವಲ್ಲ, ಖಾಸಗಿ ಬಸ್ಗಳು ಕೂಡ ಹಬ್ಬವನ್ನೇ ನೆಪವಾಗಿ ಇಟ್ಟುಕೊಂಡು ಪ್ರಯಾಣ ದರ ಏರಿಕೆ ಮಾಡಿವೆ.
ಎಷ್ಟು ಏರಿಕೆ?
ಕೆಎಸ್ಆರ್ಟಿಸಿ ನಿಗಮ 20ರಿಂದ 30 ರುಪಾಯಿ ಟಿಕೆಟ್ ದರ ಹೆಚ್ಚಳ ಮಾಡಿದೆ. ಈ ಹಿಂದೆ ಕೆಎಸ್ಆರ್ಟಿಸಿ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಬೆಂಗಳೂರು ಟು ಮೈಸೂರಿಗೆ 162 ರುಪಾಯಿ ಇತ್ತು. ಇದೀಗ 180 ರುಪಾಯಿ ಆಗಿದೆ. ನಾನ್ ಸ್ಟಾಪ್ ಬಸ್‌ನಲ್ಲಿ ಈ ಹಿಂದೆ- 210 ರುಪಾಯಿ ಇದ್ದದ್ದು ಈಗ 230 ರುಪಾಯಿಗೆ ಏರಿದೆ. ರಾಜಹಂಸ ಬಸ್‌ನಲ್ಲಿ ಈ ಹಿಂದೆ 250 ರುಪಾಯಿ ಇದ್ದದ್ದು ಇದೀಗ 280 ರುಪಾಯಿ ಆಗಿದೆ. ಎಲೆಕ್ಟ್ರಿಕ್ ಎಸಿ ಬಸ್ ಈ ಹಿಂದೆ 400 ರುಪಾಯಿ, ಇದೀಗ 420 ರುಪಾಯಿ. ಐರಾವತ ಕ್ಲಬ್ ಕ್ಲಾಸ್ ಈ ಹಿಂದೆ 430 ರುಪಾಯಿ, ಇದೀಗ 450 ರುಪಾಯಿ.
ಖಾಸಗಿ ಬಸ್ ಬಸ್ ಟಿಕೆಟ್ ದರ ಏರಿಕೆ
ಬೆಂಗಳೂರಿಂದ ಹುಬ್ಬಳ್ಳಿಗೆ ಸಾಮಾನ್ಯವಾಗಿ ಖಾಸಗಿ ಬಸ್ ಪ್ರಯಾಣದರ 1000 ರೂಪಾಯಿ ಇರುತ್ತಿತ್ತು. ಆದೀಗ, 2039 ರೂಪಾಯಿ ಆಗಿದೆ. ಇನ್ನು, ದಾವಣಗೆರೆಗೆ ತೆರಳಲು 750 ರೂಪಾಯಿ ಟಿಕೆಟ್ ದರ ಇತ್ತು. ಈಗ 1489 ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ. ಬೆಂಗಳೂರಿಂದ ಬೆಳಗಾವಿಗೆ 1200 ರೂಪಾಯಿ ಇರುತ್ತಿದ್ದ ಬಸ್ ಟಿಕೆಟ್ ದರ ಈಗ 2677 ರೂಪಾಯಿ ತನಕ ಏರಿಕೆ ಆಗಿದೆ. ಬೆಂಗಳೂರಿಂದ ಮಂಗಳೂರಿಗೆ ಸಾಮಾನ್ಯ ದಿನಗಳಲ್ಲಿ 1200 ರೂಪಾಯಿ ಇರುತ್ತಿತ್ತು. ಈಗ, 1800 ರೂಪಾಯಿ ಆಗಿದೆ. ಇನ್ನು, ಬೆಂಗಳೂರಿಂದ ಕಲಬುರಗಿಗೆ 1100 ರೂ. ಇದ್ದ ಬಸ್ ಟಿಕೆಟ್ ದರ ಈಗ 2299 ರೂಪಾಯಿ ಆಗಿದೆ. ಬಸ್ ಪ್ರಯಾಣ ದರ ಏರಿಕೆಗೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.













