ನೇಪಾಳದಲ್ಲಿ ಉಗ್ರ ಪ್ರತಿಭಟನೆಗೆ 19 ಜನ ಬಲಿ – ಗೃಹ ಸಚಿವ ರಾಜೀನಾಮೆ



(ನ್ಯೂಸ್‌ ಕಡಬ) newskadaba.com ಸೆ. 09. ಟ್ವಿಟ್ಟರ್, ಫೇಸ್ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ನೇಪಾಳ ಸರ್ಕಾರದ ನಿರ್ಧಾರ, ಯುವಜನತೆಯಲ್ಲಿ ಭಾರೀ ಆಕ್ರೋಶವನ್ನು ಉಂಟುಮಾಡಿದ್ದು, ಉಗ್ರ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಪ್ರತಿಭಟನೆಯಿಂದಾಗಿ ಹಲವರು ತಮ್ಮ ಪ್ರಾಣ ಕಳೆದುಕೊಂಡಿರುವ ಕುರಿತು ವರದಿಯಾಗಿದೆ.







ನೇಪಾಳ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ರಾಜಧಾನಿ ಕಠ್ಮಂಡು ಸೇರಿದಂತೆ ಹಲವೆಡೆ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಹಿಂಸಾತ್ಮಕ ರೂಪವನ್ನು ಪಡೆದುಕೊಂಡಿದೆ. ವರದಿಯ ಪ್ರಕಾರ, ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಕಠ್ಮಂಡುವಿನಲ್ಲಿ 16 ಮಂದಿ ಮತ್ತು ಇತರ ಪ್ರದೇಶಗಳಲ್ಲಿ 3 ಮಂದಿ ಸೇರಿದಂತೆ ಒಟ್ಟು 19 ಮಂದಿ ಪ್ರತಿಭಟನಾಕಾರರು ಜೀವ ಕಳೆದುಕೊಂಡಿದ್ದಾರೆ. ಈ ನಡುವೆ 347ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವೆಡೆ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಸಾರ್ವಜನಿಕ ಆಸ್ತಿ ಧ್ವಂಸಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.






ಈ ದುರಂತದ ಹೊಣೆ ಹೊತ್ತು, ನೇಪಾಳದ ಗೃಹ ಸಚಿವ ರಮೇಶ್ ಲೇಖಕ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಓಲಿ ಅವರಿಗೆ ಸಲ್ಲಿಸಿದ್ದಾರೆ. ಈ ಕುರಿತು ಸಂಪುಟ ಸಭೆಯಲ್ಲಿ ಅಧಿಕೃತ ಘೋಷಣೆ ಕೂಡಾ ನೀಡಲಾಗಿದೆ. ಇಂತಹ ದುಃಖದ ಸಂದರ್ಭದಲ್ಲಿ ತಮ್ಮ ಅಧಿಕಾರದಲ್ಲಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

error: Content is protected !!
Scroll to Top