(ನ್ಯೂಸ್ ಕಡಬ) newskadaba.com, ಜು.27 : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲಿ ಪತ್ತೆಯಾದ ನಕಲಿ ನೋಟು ಮುದ್ರಣ ಜಾಲದ ತನಿಖೆ ಮುಂದುವರಿದಿದ್ದು, ಪೊಲೀಸರು ಆರೋಪಿಗಳ ಬಾಡಿಗೆ ಮನೆಗೆ ದಾಳಿ ನಡೆಸಿ ಮಹತ್ವದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.ನ್ಯಾಯಾಲಯದ ಅನುಮತಿ ಪಡೆದ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ತಂಡವು, ತಲೆಮರೆಸಿಕೊಂಡಿರುವ ಅಬ್ದುಲ್ ಶಕೀಲ್ ಮತ್ತು ಬಂಧಿತ ಆರೋಪಿ ಸಂದೀಪ್ ಪುಂಡಲೀಕ್ ಶೋಳಂಬಿ ವಾಸವಾಗಿದ್ದ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲಿನ ಬಾಡಿಗೆ ಮನೆಯಲ್ಲಿ ತಪಾಸಣೆ ನಡೆಸಿದೆ.
ಶೋಧದ ವೇಳೆ ಸಂದೀಪ್ ಬಳಸುತ್ತಿದ್ದ ಕೊಠಡಿಯಿಂದ ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಪ್ರಿಂಟರ್, ರಾಸಾಯನಿಕ ದ್ರಾವಣದ ಬಾಟಲಿಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.ಜುಲೈ 16ರಂದು ಅಡೆಂಜದ ಇದ್ರೀಸ್ ಎಂಬುವರ ಮನೆಯಲ್ಲಿ ನಕಲಿ ನೋಟು ಮುದ್ರಿಸುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ യಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದರು.ಪ್ರಕರಣದಲ್ಲಿ ಇದುವರೆಗೆ ಇಬ್ರಾಹಿಂ (60), ಶರೀಫ್ (51), ಸಂದೀಪ್ (30), ನಬಾಸ್ (37), ಸಲ್ಮಾನ್ ಫಾರೀಸ್ (25), ಸಿರಾಜುದ್ದೀನ್ (34) ಮತ್ತು ಇರ್ಷಾದ್ (31) ಅವರನ್ನು ಬಂಧಿಸಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದ ನಾಲ್ವರು ಆರೋಪಿಗಳ ಅವಧಿ ಜುಲೈ 26ಕ್ಕೆ ಮುಕ್ತಾಯಗೊಂಡಿದ್ದರಿಂದ ಅವರನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಉಳಿದ ಮೂವರು ಆರೋಪಿಗಳು ಆಗಸ್ಟ್ 1ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.









