ಯುವತಿಗೆ ವಂಚನೆ ಪ್ರಕರಣ- ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದಿಂದ ಸೂಕ್ತ ಕ್ರಮಕ್ಕೆ ಎಎಸ್ಪಿಗೆ ಮನವಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 04. ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿಯನ್ನಾಗಿಸಿ ವಂಚಿಸಿದ ಪ್ರಕರಣದ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ, ಸೂಕ್ತ ಕ್ರಮ ಕೈಗೊಳ್ಳುವಂತೆ ದ. ಕ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ವತಿಯಿಂದ ಪುತ್ತೂರು ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಲಾಯಿತು.

ಕೃಷ್ಣ ಜೆ ರಾವ್ ಎಂಬಾತ ವಿಶ್ವಕರ್ಮ ಸಮಾಜದ ಹೆಣ್ಣು ಮಗಳನ್ನು ಅತ್ಯಾಚಾರವೆಸಗಿ, ಗರ್ಭವತಿಯನ್ನಾಗಿಸಿ ಇದೀಗ ಆಕೆ ಮಗುವಿಗೆ ಜನ್ಮ ನೀಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ರೀತಿಯಲ್ಲಿ ಕ್ರಮಗಳನ್ನು ಕೈಗೊಂಡು, ಆರೋಪಿಯನ ತಕ್ಷಣ ಬಂಧಿಸಿ ಅನ್ಯಾಯಕ್ಕೆ ಒಳಗಾದ ತಾಯಿ-ಮಗುವಿಗೆ ನ್ಯಾಯ ಒದಗಿಸುವಂತೆ ತಿಳಿಸಲಾಗಿದೆ. ಅಲ್ಲದೇ ನ್ಯಾಯ ಸಿಗದೇ ಹೋದಲ್ಲಿ ವಿವಿಧ ಸಂಘ ಸಂಸ್ಥೆ, ಸಮಾಜದ ಬಂಧುಗಳು ಸೇರಿ ಹೋರಾಟ ಮಾಡುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭ ಸಂಘದ ಅಧ್ಯಕ್ಷ ಸುರೇಂದ್ರ ಆಚಾರ್ಯ ಬಪ್ಪಳಿಗೆ, ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಗೌರವ ಸಲಹೆಗಾರ ಉದಯಕುಮಾರ್ ಆಚಾರ್ಯ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ಪ್ರಭಾ ಹರೀಶ್ ಆಚಾರ್ಯ ಪರ್ಲಡ್ಕ, ಕಾರ್ಯಾಧ್ಯಕ್ಷ ಸಂಜೀವ ಆಚಾರ್ಯ ಕೆ. ಆರ್, ಕೋಶಾಧಿಕಾರಿ ಸಂತೋಷ್ ಆಚಾರ್ಯ ಕಡೇಶ್ವಾಲ್ಯ, ದಿನೇಶ್ ಆಚಾರ್ಯ ಕೆಯ್ಯೂರು ಮೊದಲಾದವರು ಜೊತೆಗಿದ್ದರು.

Scroll to Top