(ನ್ಯೂಸ್ ಕಡಬ) newskadaba.com ಪುತ್ತೂರು, ಜು. 03. ಬಿಜೆಪಿ ಮುಖಂಡನ ಪುತ್ರನಿಂದ ವಂಚನೆಗೊಳಗಾಗಿರುವ ವಿದ್ಯಾರ್ಥಿನಿ ಮನೆಗೆ ಜನವಾದಿ ಮಹಿಳಾ ಸಂಘಟನೆ, ಸಾಮರಸ್ಯ ಮಂಗಳೂರು ಸಹಿತ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಭೇಟಿ ನೀಡಿ ಧೈರ್ಯ ತುಂಬಿದರು.
ಮದುವೆಯಾಗುವ ಭರವಸೆ ನೀಡಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ನಂತರ ತಲೆ ಮರೆಸಿಕೊಂಡಿರುವ ಕೃಷ್ಣ ರಾವ್ ನನ್ನು ತಕ್ಷಣ ಬಂಧಿಸಬೇಕು. ಗರ್ಭಪಾತಕ್ಕೆ ಒತ್ತಾಯಿಸಿ ಹಣದ ಆಮಿಷ ಒಡ್ಡಿದ ಸಂಘಟನೆಗಳ ಪ್ರಮುಖರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ ಅವರು, ನ್ಯಾಯ ಒದಗಿಸದಿದ್ದಲ್ಲಿ ಜಿಲ್ಲೆಯ ಜನಪರ ಮಹಿಳಾ ಸಂಘಟನೆಗಳನ್ನು ಜೊತೆ ಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ, ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ವಿದ್ಯಾ ಶೆಣೈ, ದಲಿತ ಹಕ್ಕುಗಳ ಸಮಿತಿಯ ಈಶ್ವರಿ ಪದ್ಮುಂಜ, ನ್ಯಾಯವಾದಿ ಶೈಲಜಾ ಅಮರನಾಥ್, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕಾವೂರು, ಅಸುಂತಾ ಡಿ’ಸೋಜಾ, ಪ್ರಮೀಳಾ ದೇವಾಡಿಗ ಹಾಗೂ ಪ್ಲೇವಿ ಕ್ರಾಸ್ತಾ ನಿಯೋಗದಲ್ಲಿದ್ದರು.









