ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಕೃಷಿ ಇಲಾಖೆ ಸೂಚನೆ



(ನ್ಯೂಸ್ ಕಡಬ) newskadaba.com ಜೂ. 25. 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದ್ದು ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆಯನ್ನು ಅನುಷ್ಠಾನ ಮಾಡಲು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿಯನ್ನು ನಿಗದಿಪಡಿಸಲಾಗಿರುತ್ತದೆ.







ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಕೃಷಿ ಬೆಳೆಗೆ ಸಂಬಂಧಿಸಿದಂತೆ ಭತ್ತವು ನೋಂದಾಯಿತ ಬೆಳೆಯಾಗಿದ್ದು, ಭತ್ತ ಬೆಳೆಯುವ ರೈತರು ಈ ಯೋಜನೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಈ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಯಾವುದೇ ಪ್ರಕೃತಿ ವಿಕೋಪಗಳಿಂದ/ಹವಾಮಾನ ವೈಪರೀತ್ಯದಿಂದಾಗಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.25ರ ಭಾಗವನ್ನು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. ಕಟಾವಿನ ನಂತರದ ಸಮಯದಲ್ಲಿ ಬೆಳೆಯನ್ನು ಒಣಗಿಸಲು ಬಿಟ್ಟ ಸಂದರ್ಭದಲ್ಲಿ 2 ವಾರದೊಳಗೆ ಅಕಾಲಿಕ ಮಳೆ/ಚಂಡಮಾರುತ ಸಹಿತ ಮಳೆಯಿಂದಾಗಿ ಕಟಾವು ಮಾಡಲಾದ ಬೆಳೆಯು ನಾಶವಾದರೆ ವಿಮಾ ಸಂಸ್ಥೆಯು ವೈಯಕ್ತಿಕವಾಗಿ ಬೆಳೆ ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುತ್ತದೆ.






ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಭೂಕುಸಿತ, ಬೆಳೆ ಮುಳುಗಡೆ, ಆಲಿಕಲ್ಲು ಮಳೆಯಿಂದ ಉಂಟಾಗುವ ನಷ್ಟವನ್ನು ವೈಯಕ್ತಿಕ ಕ್ಷೇತ್ರವಾರು ನಿರ್ಧರಿಸಿ ರೈತರಿಗೆ ಬೆಳೆವಿಮಾ ನಷ್ಟ ಪರಿಹಾರವನ್ನು ನೀಡಲಾಗುತ್ತದೆ. 2025 ನೇ ಸಾಲಿನ ಮುಂಗಾರಿಗೆ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಭತ್ತದ ಬೆಳೆಗೆ ನೊಂದಾಯಿಸಲು ಆಗಸ್ಟ್ 16 ಕೊನೆಯ ದಿನ. ಪ್ರತಿ ಎಕರೆಗೆ ವಿಮಾ ಮೊತ್ತ (Sum

 

Insured) ರೂ.25,800 ಆಗಿರುತ್ತದೆ ಹಾಗೂ ವಿಮಾ ಕಂತು (ರೈತರ ವಂತಿಕೆ) ಒಂದು ಎಕರೆಗೆ ರೂ.516 ಇರುತ್ತದೆ. ಅರ್ಹ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹತ್ತಿರದ ಬ್ಯಾಂಕುಗಳಲ್ಲಿ ನಿಗದಿತ ದಿನಾಂಕದೊಳಗೆ ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕಾಗಿ ಮತ್ತು ವಿಮೆ ಮಾಡಿಸಿದ ರೈತರು ಬೆಳೆ ನಷ್ಟದ ಬಗ್ಗೆ ಸಂಬಂಧಿಸಿದ ಹಣಕಾಸು ಸಂಸ್ಥೆ ಅಥವಾ ವಿಮಾಸಂಸ್ಥೆ ಕಛೇರಿಗಳಿಗೆ ನಷ್ಟ ಸಂಭವಿಸಿದ 72 ಗಂಟೆಯೊಳಗೆ ವಿಮೆ ಮಾಡಿಸಲಾದ ಬೆಳೆ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣವನ್ನು ತಿಳಿಸಬೇಕಾಗುತ್ತದೆ.

 

ಬೆಳೆ ಸಾಲ ಪಡೆದ/ಪಡೆಯದ ರೈತರಿಗೆ ಬೆಳೆ ವಿಮೆ ಐಚ್ಛಿಕ. ರೈತರು ನೋಂದಣಿಗಾಗಿ ಕಡ್ಡಾಯವಾಗಿ ಫ್ರೂಟ್ಸ್ ಐ.ಡಿ. (FID) ಹೊಂದಿರಬೇಕು. ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆಯಲ್ಲಿ ಭಾಗವಹಿಸಲು ಇಚ್ಚಿಸದಿದ್ದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಕೊನೆಯ ದಿನಾಂಕದ ಒಂದು ವಾರದ ಮೊದಲು ಈ ಕುರಿತು ಮುಚ್ಚಳಿಕೆ ಪತ್ರ ನೀಡಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top