
(ನ್ಯೂಸ್ ಕಡಬ) newskadaba.com, ಅ.13. ತಾಯಿ ಮಾಟಮಂತ್ರ ಮಾಡುತ್ತಿದ್ದಾಳೆ ಎಂಬ ಮೂಢನಂಬಿಕೆಯ ಶಂಕೆಯಲ್ಲಿ 21 ವರ್ಷದ ಯುವಕನೊಬ್ಬ ತನ್ನ ಸ್ವಂತ ತಾಯಿಯ ಮೇಲೆಯೇ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 40 ವರ್ಷದ ಕಾರೆ ಸಾಯಮ್ಮ ಮೃತಪಟ್ಟಿದ್ದು, ಆರೋಪಿ ಮಗ ಕಾರೆ ದುರ್ಗೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಹಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಸಂಭವಿಸಿದ ಕೆಲವು ಸಾವುಗಳಿಗೆ ತಾಯಿಯೇ ಕಾರಣ ಎಂದು ಆತ ನಂಬಿದ್ದನು.
ಹೈದರಾಬಾದ್ನಿಂದ ಗ್ರಾಮಕ್ಕೆ ಬಂದಿದ್ದ ದುರ್ಗೇಶ್, ಶನಿವಾರದಂದು ತನ್ನ ಆಟೋರಿಕ್ಷಾದಿಂದ ಡೀಸೆಲ್ ತೆಗೆದುಕೊಂಡು ತಾಯಿಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಸಾಯಮ್ಮ ಗಂಭೀರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ.ಸ್ಥಳೀಯರನ್ನು ವಿಚಾರಣೆ ನಡೆಸಿದಾಗ ಸಾಯಮ್ಮ ಮಾಟಮಂತ್ರ ಮಾಡುತ್ತಿದ್ದರು ಎಂಬುದಕ್ಕೆ ಯಾವುದೇ ಪುರಾವೆ ಅಥವಾ ಸಾಕ್ಷ್ಯ ಸಿಕ್ಕಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಿಪರೀತ ಮದ್ಯವ್ಯಸನಿಯಾಗಿದ್ದ ಆರೋಪಿ ಕೃತ್ಯದ ವೇಳೆ ಅಮಲಿನಲ್ಲಿದ್ದನೆಂದು ಶಂಕಿಸಲಾಗಿದೆ. ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಜೋಗಿಪೇಟೆಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.




