ಬಾಡಿಗೆಗೆಂದು ಕೊಟ್ಟ ಲಾರಿಯನ್ನು ಅಡವಿಟ್ಟ ಚಾಲಕ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 18. ಬಾಡಿಗೆಗೆಂದು ತೆಗೆದುಕೊಂಡು ಹೋದ ಲಾರಿಯನ್ನು ಚಾಲಕ ಅಡವಿಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ.  ಈ ಕುರಿತು ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ನಿವಾಸಿ ಫರ್ವೀಜ್‌ ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

ವರದಿಯ ಪ್ರಕಾರ, ಫರ್ವಿಜ್‌ ಅವರು ತಮ್ಮ ಲಾರಿಗೆ ಅಸಾಸುದ್ದೀನ್‌ ಫೈರೋಜ್‌ ಎಂಬಾತನನ್ನು ಚಾಲಕನಾಗಿ ನೇಮಿಸಿದ್ದರು. ಮಾ. 29 ರಂದು ಸರಕು ಸಾಗಾಟದ ಉದ್ದೇಶಕ್ಕೆಂದು ಲಾರಿಯನ್ನು ಚಾಲಕ ಪಡೆದಿದ್ದು, ನಂತರ ಲಾರಿಯಾಗಲಿ, ಬಾಡಿಗೆ ಹಣವಾಗಲಿ ನೀಡಲಿಲ್ಲ. ಈ ಕುರಿತು ಮಾಲಕ ಫರ್ವೀಜ್‌ ವಿಚಾರಣೆ ಮಾಡಿದಾಗ ಲಾರಿ ಕೆಟ್ಟು ಹೋಗಿದೆ ಎನ್ನುವ ಸಬೂಬು ಹೇಳಿದ್ದಾನೆ. ದಿನಗಳು ಕಳೆದರೂ ಚಾಲಕ ಲಾರಿ ವಾಪಾಸು ತರದ ಕಾರಣ ಮತ್ತೆ ಪ್ರಶ್ನೆ ಮಾಡಿದಾಗ ಲಾರಿಯನ್ನು ಮಂಗಳೂರಿನ ನೀರುಮಾರ್ಗದಲ್ಲಿರುವ ಕಿರಣ್‌ @ನೆಸ್ಲೆ ಕಿರಣ್‌ ಎಂಬಾತನಿಗೆ ಅಡವಿಟ್ಟಿರುವುದಾಗಿ ಹೇಳಿದ್ದಾನೆ. ಅಲ್ಲದೇ ಆರೋಪಿಯು ನಿನಗೆ ಬೇಕಿದ್ದರೆ ಅಲ್ಲಿಗೆ ಹೋಗು ಎನ್ನುವ ಉಡಾಫೆ ಉತ್ತರ ಕೊಟ್ಟಿದ್ದಾನೆ ಎನ್ನಲಾಗಿದೆ.

ಅದರಂತೆ ಲಾರಿ ಮಾಲಕ ಫರ್ವೀಜ್‌ ಅವರು ಎ.03ರಂದು ನೀರುಮಾರ್ಗದ ಕಿರಣ್‌ ಅವರನ್ನು ಭೇಟಿಯಾಗಿ ವಿಚಾರಿಸಿದಾಗ, ‘ಲಾರಿ ನನ್ನ ಬಳಿ ಇದೆ. ಇಲ್ಲಿಗೆ ನೀವು ಬಂದರೆ ಜೀವಸಹಿತ ವಾಪಸ್‌ ಹೋಗುವುದಿಲ್ಲ. ಮರ್ಯಾದೆಯಿಂದ ಹೋಗಿ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜೀವಬೆದರಿಕೆ ಹಾಕಿರುವ ಕುರಿತು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

Scroll to Top