(ನ್ಯೂಸ್ ಕಡಬ) newskadaba.com ಮುಜಾಫರ್ ನಗರ, ಎ.02. ಕಷ್ಟಪಟ್ಟು ಕಲಿತು ಪರೀಕ್ಷೆ ಎದುರಿಸಬೇಕಿದ್ದ ವಿದ್ಯಾರ್ಥಿಯೋರ್ವ ಉತ್ತರ ಪತ್ರಿಕೆಯಲ್ಲಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಯುಪಿ ಬೋರ್ಡ್‌ನ ಮಧ್ಯಂತರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಉತ್ತರಗಳನ್ನು ಬರೆದಿದ್ದು, ವಿದ್ಯಾರ್ಥಿಗಳು ನೀಡಿರುವ ಉತ್ತರಗಳು ಹಾಸ್ಯಾಸ್ಪದ ಎನ್ನಿಸಿದರೂ, ಅವರ ಮುಂದಿನ ಭವಿಷ್ಯ ಎತ್ತ ಸಾಗುತ್ತಿದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ. ರಾಸಾಯನಶಾಸ್ತ್ರ ಪರೀಕ್ಷೆಯಲ್ಲಿ ವಿದ್ಯಾರ್ಥಿಯೋರ್ವ ತನ್ನ ಪ್ರೇಮ ನಿವೇದನೆಯನ್ನೇ ಬರೆದಿದ್ದು, ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ. ‘ನಾನು ಪೂಜಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು, ಈ ಪ್ರೀತಿ ಎನ್ನುವುದು ವಿಚಿತ್ರವಾಗಿದೆ. ಪ್ರೀತಿಯು ತನ್ನ ತೆಕ್ಕೆಗೆ ಬಿದ್ದವರನ್ನು ಬದುಕಲೂ ಬಿಡುವುದಿಲ್ಲ, ಸಾಯಲು ಸಹ ಬಿಡುವುದಿಲ್ಲ. ಈ ಪ್ರೀತಿ ಎಂಬ ಮಾಯೆಯು ನನ್ನನ್ನು ಓದಿನಿಂದ ದೂರ ಮಾಡಿದೆ ಎಂದು ಬರೆದಿದ್ದಾನೆ. ಕೆಲವು ವಿದ್ಯಾರ್ಥಿಗಳು ವಿಭಿನ್ನವಾಗಿ ಉತ್ತರಿಸಿದ್ದು, ಉತ್ತರ ಪತ್ರಿಕೆಗಳಿಗೆ ನೋಟುಗಳನ್ನು ಲಗತ್ತಿಸಿ ಮೌಲ್ಯಮಾಪನ ಮಾಡುವವರಿಗೆ ಆಮಿಷ ಒಡ್ಡಲು ಯತ್ನಿಸಿದ್ದಾರೆ.
ಇನ್ನೊಬ್ಬ ವಿದ್ಯಾರ್ಥಿಯಂತೂ ಭಾವನಾತ್ಮಕವಾಗಿ ಬರೆದಿದ್ದು, ‘ನಾನು ತಾಯಿ ಇಲ್ಲದ ತಬ್ಬಲಿಯಾಗಿರುವ ಕಾರಣ ನೀವು ನನ್ನನ್ನು ಪರೀಕ್ಷೆಯಲ್ಲಿ ಫೈಲ್ ಮಾಡಿದರೆ, ನನ್ನ ತಂದೆ ನನ್ನನ್ನು ಕೊಂದೇ ಬಿಡುತ್ತಾರೆ. ದಯವಿಟ್ಟು ಪಾಸ್ ಮಾಡಿ ಎಂದಿದ್ದಾನೆ. ಇನ್ನೋರ್ವ ವಿದ್ಯಾರ್ಥಿ ಫೈಲ್ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಒಡ್ಡಿದ್ದಾನೆ ಎನ್ನಲಾಗಿದೆ.