(ನ್ಯೂಸ್ ಕಡಬ) newskadaba.com ಮಾ. 20 ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಹೇಳಿದರು.

ನವದೆಹಲಿ ಭೇಟಿ ನೀಡಿರುವ ಡಿಕೆ.ಶಿವಕುಮಾರ್ ಅವರು, ಈ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರೆ ನಾಯಕರನ್ನು ಭೇಟಿ ಮಾಡಿ ಕೆಪಿಸಿಸಿ ಕಚೇರಿಯ ಶಂಕುಸ್ಥಾಪನಾ ಸಮಾರಂಭಕ್ಕೆ ಆಹ್ವಾನಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಹಾಗೂ ಪಕ್ಷದ ಪ್ರಧಾನ ಕಾರ್ಯ ದರ್ಶಿಗಳನ್ನು ಭೇಟಿ ಮಾಡಿ ನೂತನ ಕಾಂಗ್ರೆಸ್ ಭವನದ ಭೂಮಿ ಪೂಜೆಗೆ ಸಮಯ ನೀಡಿ ಎಂದು ಹೇಳಿದ್ದೇನೆ. 100 ಕಾಂಗ್ರೆಸ್ ಕಚೇರಿಗಳನ್ನು ಕಟ್ಟಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅವರು ಸಮಯ ನೀಡಿದಾಗ ಭೂಮಿಪೂಜೆ ನಡೆಸಲಾಗುವುದು ಎಂದು ಹೇಳಿದರು.
ಹೈಕಮಾಂಡ್’ಗೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ತಿಳಿದಿದೆ. ಪ್ರತಿಯೊಬ್ಬ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ-ತಮ್ಮ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದಾರೆಂದು ತಿಳಿಸಿದ್ದೇನೆ. ಈ ಸಭೆಗಳ ಫೋಟೋ ಹಾಗೂ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಅದನ್ನು ಮಾಡುತ್ತೇವೆಂದು ತಿಳಿಸಿದರು.