(ನ್ಯೂಸ್ ಕಡಬ) newskadaba.com ಜ.11: ಅಸ್ಸಾಂನ 10 ತಿಂಗಳ ಮಗುವಿನಲ್ಲಿ ಚೀನಾದ ಹ್ಯೂಮನ್ ಮೆಟಾನ್ಯೂಮೋ ವೈರಸ್(ಹೆಚ್ಎಂಪಿವಿ) ಪತ್ತೆಯಾಗಿದೆ.
ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮಗುವಿಗೆ ದಿಬ್ರುಗಢ್ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಎಎಂಸಿಹೆಚ್ ಸೂಪರಿಂಟೆಂಡೆಂಟ್ ಧೃಬಜ್ಯೋತಿ ಭುಯಾನ್ ಅವರು, ಕಳೆದ 4 ದಿನಗಳಿಂದ ಮಗುವು ಶೀತ ಜ್ವರದಿಂದ ಬಳಲುತ್ತಿದ್ದು, ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗ ಲಕ್ಷಣಗಳ ಆಧಾರದ ಮೇರೆಗೆ ಮಗುವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಗುವಿನಲ್ಲಿ ಹೆಚ್ಎಂಪಿವಿ ಸೋಂಕು ಇರೋದು ದೃಢವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ವರ್ಷದಲ್ಲಿ ಅಸ್ಸಾಂನಲ್ಲಿ ಕಾಣಿಸಿಕೊಂಡ ಮೊದಲ ಸೋಂಕು ಇದಾಗಿದೆ. ಆದಾಗ್ಯೂ ಇದು ಹೊಸದೇನಲ್ಲ ಎಂದು ವೈದ್ಯರು ಹೇಳಿದ್ದಾರೆ. 2001ರಲ್ಲಿ ಮೊದಲಬಾರಿಗೆ ಗುರುತಿಸಲಾದ ಈ ವೈರಸ್ ಹಲವು ವರ್ಷಗಳಿಂದ ಜಾಗತಿಕವಾಗಿ ಅಸ್ತಿತ್ವದಲ್ಲಿದೆ. 2014ರಲ್ಲಿ ಅಸ್ಸಾಂನಲ್ಲಿ ದಿಬ್ರುಗಢ ಜಿಲ್ಲೆಯಲ್ಲಿ 110 ಪ್ರಕರಣಗಳನ್ನು ಗುರುತಿಸಿದ್ದೆವು. ಪ್ರತಿ ವರ್ಷವೂ ಇದು ಪತ್ತೆಯಾಗುತ್ತಿದೆ. ಜನ ಆತಂಕ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ವಹಿಸಿದ್ರೆ ಸಾಕು ಎಂದು ವೈದ್ಯರು ಹೇಳಿದ್ದಾರೆ.