ಒಂದೇ ವರ್ಷದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್..!

(ನ್ಯೂಸ್ ಕಡಬ) newskadaba.com ಅ. 31. ಈ ಬೆಳೆಯುತ್ತಿರುವ ಯುಗದಲ್ಲಿ ದೇಶಾದ್ಯಂತ ಇ-ಕಾಮರ್ಸ್‌ ಸಂಸ್ಕೃತಿ ವೃದ್ಧಿಯಾಗಿ ಸಾರ್ವಜನಿಕರು ಆನ್‌ ಲೈನ್‌ ಶಾಪಿಂಗ್‌ ಕಡೆ ಹೆಚ್ಚಿನ ಒಲವು ತೋರುತ್ತಿದ್ದು, ಇದರಿಂದ ಕಿರಾಣಿ ಅಂಗಡಿಗಳ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಕಳೆದೊಂದು ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಕಿರಾಣಿ ಅಂಗಡಿಗಳಿಗೆ ಬೀಗ ಬಿದ್ದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. 4 ಲಕ್ಷಕ್ಕೂ ಅಧಿಕ ವಿತರಕರ ಸಂಘಟನೆಯಾಗಿರುವ ಅಖಿಲ ಭಾರತ ಗ್ರಾಹಕ ವಸ್ತುಗಳ ಪೂರೈಕೆದಾರರ ಸಂಘಟನೆ ನಡೆಸಿದ ಅಧ್ಯಯನ, ದೇಶದಲ್ಲಿ ಇ-ಕಾಮರ್ಸ್‌ ಉದ್ಯಮ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿಗೊಂಡ ಬಳಿಕ ನಡೆದ ಮೊದಲ ಸಮಗ್ರ ಅಧ್ಯಯನ ಎನ್ನಲಾಗಿದೆ.

ಅಧ್ಯಯನ ವರದಿಯ ಪ್ರಕಾರ, ಮಹಾನಗರಗಳಲ್ಲಿ ಮಾಸಿಕ ಸರಾಸರಿ 5.5 ಲಕ್ಷ ರೂಪಾಯಿ ವಹಿವಾಟು ನಡೆಸುವ 17 ಲಕ್ಷ ಅಂಗಡಿಗಳಿದ್ದು, ಇವುಗಳಲ್ಲಿ ಶೇಕಡಾ 45ರಷ್ಟು ಮುಚ್ಚಿವೆ. ಅತ್ತ ಮಾಸಿಕ ಸರಾಸರಿ 3.5 ಲಕ್ಷ ರೂಪಾಯಿಗಳಷ್ಟು ವ್ಯಾಪಾರ ನಡೆಸುವ 12 ಲಕ್ಷ ಅಂಗಡಿಗಳಿರುವ ಟೈರ್‌ 1 ನಗರಗಳಲ್ಲಿ ಶೇಕಡಾ 30 ಅಂಗಡಿಗಳು ಮುಚ್ಚಿದ್ದು, ಟೈರ್‌ 2 ನಗರಗಳಲ್ಲಿ ಶೇಕಡಾ 25 ಅಂಗಡಿಗಳು ಬಾಗಿಲು ಹಾಕಿವೆ. ದೇಶದಲ್ಲಿ ಒಟ್ಟು 1.3 ಕೋಟಿ ಕಿರಾಣಿ ಅಂಗಡಿಗಳಿದ್ದು, ಈ ಪೈಕಿ ಟೈರ್‌ 1 ಸಿಟಿಗಳು ಅಂದರೆ ದೊಡ್ಡ ನಗರಗಳು 12 ಲಕ್ಷ ಅಂಗಡಿಗಳನ್ನು ಹೊಂದಿದ್ದರೆ, ಟೈರ್‌ 2 ಮತ್ತು ಟೈರ್‌ 3 ನಗರಗಳು ಉಳಿದ 1 ಕೋಟಿಗಿಂತ ಹೆಚ್ಚಿನ ಕಿರಾಣಿ ಅಂಗಡಿಗಳನ್ನು ಹೊಂದಿವೆ.

Also Read  ಜೂನಿಯರ್ ಸ್ಟೈನ್ ಖ್ಯಾತಿಯ ಮುಂಬೈ ಕ್ರಿಕೆಟ್ ಆಟಗಾರ ನೇಣಿಗೆ ಶರಣು

ಅಧ್ಯಯನ ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ವಿತರಕರ ಒಕ್ಕೂಟದ ಅಧ್ಯಕ್ಷ ಧೈರ್ಯಶಾಲಿ ಪಾಟೀಲ್‌, ‘ಸೂಪರ್‌ ಮಾರ್ಕೆಟ್‌ ಗಳಿಗೂ ಸಡ್ಡು ಹೊಡೆದಿದ್ದ ಕಿರಾಣಿ ಅಂಗಡಿಗಳು ಇದೀಗ ಇ-ಕಾಮರ್ಸ್‌ ಹಾಗೂ ಆರ್ಥಿಕ ಹಿಂಜರಿತದ ಕಾರಣ ಅಪಾಯದಲ್ಲಿವೆ. ಜನರನ್ನು ಸೆಳೆಯುವ ಸಲುವಾಗಿ ಕಡಿಮೆ ಅಥವಾ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರುತ್ತಿರುವ ಆನ್‌ ಲೈನ್‌ ವಾಣಿಜ್ಯ ಸಂಸ್ಥೆಗಳು ಕಿರಾಣಿ ಅಂಗಡಿಗಳ ಗ್ರಾಹಕರನ್ನು ಕಸಿಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾನೂನು ಬಾಹಿರ ದರಸಮರ ನಡೆಸುತ್ತಿರುವ ಝೊಮಾಟೋದ ಬ್ಲಿಂಕಿಟ್‌, ಸ್ವಿಗ್ಗಿಯ ಇನ್ಸ್ಟಾ ಮಾರ್ಟ್‌ ಮತ್ತು ಝೆಪ್ಟೋ ಕಂಪನಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಪಾಟೀಲ್‌ ಆಗ್ರಹಿಸಿದ್ದಾರೆ.

error: Content is protected !!
Scroll to Top