ಜಿಲ್ಲಾದ್ಯಂತ ಇ-ಆಟೋ ಪರವಾನಗಿ ಹಿಂಪಡೆಯುವುದಿಲ್ಲ- ಡಿಸಿ ಮುಲ್ಲೈ ಮುಗಿಲನ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. ಜಿಲ್ಲಾದ್ಯಂತ ಇಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಪ್ರದೇಶ ನಿರ್ಬಂಧಗಳಿಲ್ಲದೇ ಸಂಚರಿಸಲು ಅನುಮತಿ ನೀಡಿ ಜುಲೈ 26ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆಟೋ-ರಿಕ್ಷಾ ಮಾಲೀಕರು ಮತ್ತು ಚಾಲಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿ ಮತ್ತು ಹೈಕೋರ್ಟ್ ನಿರ್ದೇಶನದ ಮೇರೆಗೆ ಈ ಆದೇಶವನ್ನು ಕಾನೂನು ಚೌಕಟ್ಟಿನಲ್ಲಿ ಹೊರಡಿಸಲಾಗಿದೆ. ಸಂಬಂಧಪಟ್ಟವರು ಮೇಲ್ಮನವಿಯ ಮೂಲಕ ಹೆಚ್ಚಿನ ಸ್ಪಷ್ಟೀಕರಣವನ್ನು ಪಡೆಯಬಹುದು ಎಂದಿದ್ದಾರೆ. ಯಾವುದೇ ನಗರ ಅಥವಾ ಗ್ರಾಮಾಂತರ ನಿರ್ಬಂಧಗಳಿಲ್ಲದೇ ಇ-ಆಟೋಗಳು ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರವು ಉಚಿತ ಪರವಾನಗಿಗಳನ್ನು ನೀಡಿದೆ. ಇದನ್ನು ಮಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಜಾರಿಗೆ ತರಲಾಗುತ್ತಿದೆ. ಆದರೆ, ತಮಿಳುನಾಡಿನಲ್ಲಿ ನಿರ್ಬಂಧ ಹೇರಲಾಗಿದೆ. ಇಲ್ಲಿ ಅಂತಹ ನಿರ್ಬಂಧಗಳು ಜಾರಿಯಾಗಬೇಕಾದರೆ ರಾಜ್ಯ ಮಟ್ಟದಲ್ಲಿ ಜಾರಿಯಾಗಬೇಕು ಎಂದು ಹೇಳಿದರು.

Scroll to Top