(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಸೆ. 02. ಪ್ರಯಾಣಿಕರ ಅನುಕೂಲಕ್ಕಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಸೆ. 05 ರಿಂದ 10ರ ವರೆಗೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಈ ವರ್ಷ ಗೌರಿ-ಗಣೇಶ ಹಬ್ಬವು ವೀಕೆಂಡ್ ನಲ್ಲಿ ಬಂದಿದ್ದು, ಸೆಪ್ಟೆಂಬರ್ 6ರಂದು ಶುಕ್ರವಾರ ಗೌರಿ ಹಬ್ಬ, ಸೆ. 07ರಂದು ಗಣೇಶ ಚತುರ್ಥಿ ಹಾಗೂ 8ರಂದು ಭಾನುವಾರ ಸಾರ್ವಜನಿಕ ರಜೆ ಇರುತ್ತದೆ. ಹಬ್ಬದ ಆಚರಣೆಗಾಗಿ ಬೆಂಗಳೂರು, ಮಂಗಳೂರು, ಪುಣೆ, ಮುಂಬೈ, ಗೋವಾ ಮತ್ತಿತರ ಪ್ರಮುಖ ಊರುಗಳಲ್ಲಿ ನೆಲೆಸಿರುವ ಹಲವರು ಸ್ವಂತ ಊರುಗಳಿಗೆ ಆಗಮಿಸಲಿದ್ದಾರೆ. ಅವರ ಅನುಕೂಲಕ್ಕಾಗಿ ಸೆಪ್ಟೆಂಬರ್ 5ರಿಂದ 10ರವರೆಗೆ ಹೆಚ್ಚುವರಿ ವಿಶೇಷ ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅದಕ್ಕಾಗಿ ವೋಲ್ವೋ, ಎಸಿ ಐರಾವತ, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ರಾಜಹಂಸ ಹಾಗೂ ವೇಗದೂತ ಸಾರಿಗೆಗಳು ಸೇರಿದಂತೆ ವಿವಿಧ ಮಾದರಿಯ ಬಸ್‌ಗಳನ್ನು ನಿಯೋಜಿಸಲಾಗಿದೆ.
ಅದೇ ರೀತಿ ಹಬ್ಬದ ರಜೆ ಮುಗಿಸಿಕೊಂಡು ತಮ ಕಾರ್ಯ ಕ್ಷೇತ್ರಗಳಿಗೆ ಹಿಂದಿರುಗುವವರ ಅನುಕೂಲಕ್ಕಾಗಿ ಸೆ. 08ರಂದು ರವಿವಾರ ಹಾಗೂ 9ರಂದು ಹುಬ್ಬಳ್ಳಿಯಿಂದ ಬೆಂಗಳೂರು, ಪುಣೆ, ಗೋವಾ, ಮಂಗಳೂರು, ವಿಜಯಪುರ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ವಿಶೇಷ ಬಸ್ಸುಗಳನ್ನುನಿಯೋಜಿಸಲಾಗಿದೆ. ಹಬ್ಬದ ಪ್ರಯುಕ್ತ ಸೆ. 05ರಿಂದ 10ರವರೆಗೆ ಜಿಲ್ಲೆಗಳ ಪ್ರಮುಖ ಸ್ಥಳಗಳ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟ ನಿರೀಕ್ಷಿಸಲಾಗಿರುವುದರಿಂದ ಈ ಅವಧಿಯಲ್ಲಿ ಪ್ರಯಾಣಿಕರ ನುಕೂಲತೆಗೆ ತಕ್ಕಂತೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.