(ನ್ಯೂಸ್ ಕಡಬ) newskadaba.com. ಉಪ್ಪಿನಂಗಡಿ, ಮೇ.1, ಮೀನು ಹಿಡಿಯಲೆಂದು ತೆರಳಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೆಂಪಿಮಜಲು ಎಂಬಲ್ಲಿನ ನೇತ್ರಾವತಿ ನದಿಯ ಸನ್ಯಾಸಿ ಕಯ ಎಂಬ ಪ್ರದೇಶದಲ್ಲಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ರೂಪೇಶ್ (17) ಮೃತರು ಎಂದು ತಿಳಿದು ಬಂದಿದೆ.
ಬಜತ್ತೂರು ಗ್ರಾಮದ ಪೆಲತ್ರೋಡಿ ಮನೆ ನಿವಾಸಿ ಓಡಿಯಪ್ಪ ಎಂಬವರ ಪುತ್ರ ರೂಪೇಶ್ ಕಬಡ್ಡಿ ಆಟಗಾರನಾಗಿಯೂ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ. ಈತ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಇಳಂತಿಲ ಗ್ರಾಮದ ಕಟ್ಟೆಚ್ಚಾರ್ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಈತ ತನ್ನ ಸಂಬಂಧಿ ಅಖಿಲೇಶ್ ಎಂಬಾತನೊಂದಿಗೆ ನೇತ್ರಾವತಿ ನದಿಯ ಸನ್ಯಾಸಿ ಕಯದಲ್ಲಿ ಮೀನು ಹಿಡಿಯಲೆಂದು ತೆರಳಿದ್ದ. ನದಿಯಲ್ಲಿ, ಈಜು ಬಾರದೆ ನೀರಿನಲ್ಲಿ ಮುಳುಗಿ ಅಸ್ವಸ್ಥನಾಗಿದ್ದ. ಜೊತೆಗಿದ್ದ ಅಖಿಲೇಶ್ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಆಸ್ಪತ್ರೆಯಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರೆಂದು ತಿಳಿದು ಬಂದಿದೆ. ಮೃತ ವಿದ್ಯಾರ್ಥಿಯ ತಾಯಿ ಗೋಪಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.