(ನ್ಯೂಸ್ ಕಡಬ) newskadaba,ಚಂಡೀಗಢ ಜೂ.19: ಭಾರತದ ಕೀರ್ತಿ ಪತಾಕೆಯನ್ನು ದೇಶ ವಿದೇಶದಲ್ಲಿ ಹಾರಿಸುವಂತೆ ಮಾಡಿದ್ದ ದಿಗ್ಗಜ ಅಥ್ಲೀಟ್ ಮಿಲ್ಕಾ ಸಿಂಗ್ (Milkha Singh) ಇನ್ನಿಲ್ಲ. 91 ವರ್ಷದ ಮಿಲ್ಕಾ ಸಿಂಗ್ ಹಾಗೂ ಅವರ ಮಡದಿ ನಿರ್ಮಲ್ ಕೌರ್ ಅವರಿಗೆ ಕಳೆದ ತಿಂಗಳು ಕೊರೋನಾ ಸೋಂಕಾಗಿತ್ತು. ಸೊಂಕಾಗಿತ್ತು. ಕಳೆದ ಭಾನುವಾರ ನಿರ್ಮಲ್ ಕೌರ್ ಅವರು ಕೋವಿಡ್ನಿಂದಾಗಿಯೇ ಕೊನೆಯುಸಿರೆಳೆದಿದ್ದರು. ಕಳೆದ ಒಂದು ತಿಂಗಳಿನಿಂದ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಿಲ್ಕಾ ಸಿಂಗ್ ಅವರು ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಮಿಲ್ಕಾ ಸಿಂಗ್ ಅವರು ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನನ್ನು ಅಗಲಿದ್ದಾರೆ.

ಮಿಲ್ಕಾ ಸಿಂಗ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಮಹಾನ್ ಕ್ರೀಡಾಪಟುವನ್ನು ಕಳೆದುಕೊಂಡಿದ್ದೇವೆ. ಇಡೀ ದೇಶದ ಕಲ್ಪನೆಯ ಮೇಲೆ ಹಿಡಿತ ಸಾಧಿಸಿದ್ದ ಮಿಲ್ಕಾ ಸಿಂಗ್ ಅಸಂಖ್ಯ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದರು ಎಂದು ಟ್ವೀಟ್ ಮಾಡಿದ್ದಾರೆ.ಮಿಲ್ಕಾ ಸಿಂಗ್ ಅವರ ನಿಧನಕ್ಕೆ ರಾಜಕೀಯ ನಾಯಕರು, ಕ್ರೀಡಾಪಟುಗಳು ಹಾಗೂ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ನಟ ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಕಂಬನಿ ಮಿಡಿದಿದ್ದಾರೆ.










