ಬಂಟ್ವಾಳ: ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ವ್ಯಕ್ತಿಗೆ ಚೂರಿಯಿಂದ ಇರಿದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ. 04. ಬೈಕಿನಲ್ಲಿ ಹಿಂಬಾಳಿಸಿಕೊಂಡು ಬಂದ ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಿ.ಸಿ ರೋಡಿನ ಅಜ್ಜಿಬೆಟ್ಟು ಕ್ರಾಸ್ ಬಳಿ ನಡೆದಿದೆ.


ಚೂರಿ ಇರಿತಕ್ಕೊಳಗಾದವರನ್ನು ಬ್ರಹ್ಮರಕೂಟ್ಲು ವಳವೂರು ನಿವಾಸಿ ಮನೋಜ್ ಸಪಲ್ಯ (30) ಎಂದು ಗುರುತಿಸಲಾಗಿದೆ. ಮನೋಜ್ ಅವರು ತುಂಬೆಯಿಂದ ಬಿಸಿರೋಡು ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದರು. ಇದನ್ನು ಗಮನಿಸಿದ ಮನೋಜ್ ಬಿಸಿರೋಡಿಗೆ ಆಗಮಿಸುತ್ತಿದ್ದಂತೆಯೇ ಅಜ್ಜಿಬೆಟ್ಟು ಕ್ರಾಸ್‌ ನೊಳಗೆ ಬೈಕನ್ನು ತಿರುಗಿಸಿ ಅಂಗಡಿಯೊಂದರ ಮುಂಭಾಗದಲ್ಲಿ ನಿಲ್ಲಿಸಿದ್ದರು. ಆದರೆ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಮನೋಜ್ ಬೈಕ್ ನಿಲ್ಲಿಸದಲ್ಲೇ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಗಾಯಗೊಂಡ ಮನೋಜ್ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Also Read  ಗ್ರಂಥಾಲಯ - ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

error: Content is protected !!
Scroll to Top