(ನ್ಯೂಸ್ ಕಡಬ) newskadaba.com ಮಂಗಳೂರು ಆ. 26. ಕಾಸರಗೋಡು, ಆ. 26. ಜಿಲ್ಲೆಯಿಂದ ಕರ್ನಾಟಕಕ್ಕೆ ದೈನಂದಿನ ಕರ್ತವ್ಯಕ್ಕೆ ಸಂಚಾರ ಮಾಡಲು ಇನ್ನು ಮುಂದೆ ರೆಗ್ಯುಲರ್ ಪಾಸ್ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಆದೇಶವನ್ನು ಹೊರಡಿಸಿದ್ದಾರೆ.
ಅವರು ಇಂದು ನಡೆದ ಜಿಲ್ಲಾ ಮಟ್ಟದ ಕೊರೋನಾ ಸಲಹಾ ಸಮಿತಿಯ ವಿಡಿಯೋ ಕಾನ್ಫರೆನ್ಸ್ ನಲ್ಲಿ ನಡೆದ ಸಭೆಯಲ್ಲಿ ಇ ಮಾಹಿತಿಯನ್ನು ನೀಡಿದರು. ದೈನಂದಿನ ಚಟುವಟಿಕೆಗಳ ಸಂಚಾರಕ್ಕೆ ಕಡ್ಡಾಯ ಪಾಸ್ ವ್ಯವಸ್ಥೆಯನ್ನು ಹಿಂತೆಗೆದುಕೊಂಡಿದ್ದು, ಆಂಟಿಜನ್ ತಪಾಸಣೆ ನಡೆಸಿದ ನೆಗಟಿವ್ ರಿಪೋರ್ಟ್ ಜೊತೆ ಕೊರೋನಾ ಜಾಗೃತಾ ಪೋರ್ಟಲ್ ನಲ್ಲಿ ನೋಂದಾಯಿಸಿದರೆ ಸಾಕಾಗುತ್ತದೆ. ರಾಷ್ಟೀಯ ಹೆದ್ದಾರಿ 66ರ ತಲಪಾಡಿ ಅಲ್ಲದೆ ಪಾಣತ್ತೂರು, ಮಾಣಿಮೂಲೆ, ಪೆರ್ಲ, ಜಾಲ್ಸೂರು ಮೊದಲಾದ ಪ್ರಮುಖ ರಸ್ತೆಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಸಂಚರಿಸಲು ಅನುಮತಿ ನೀಡಲಾಗಿದೆ. ಈ ರಸ್ತೆಗಳಲ್ಲಿ ಸಂಚರಿಸುವವರಿಗೆ ಆಂಟಿಜನ್ ತಪಾಸಣೆ ನಡೆಸಿ ಕೋವಿಡ್-19 ಪೋರ್ಟಲ್ ನಲ್ಲಿ ನೋಂದಾಯಿಸಬೇಕು . ಈ ರಸ್ತೆ ಮೂಲಕ ತೆರಳುವವರಿಗೆ ಆಂಟಿಜನ್ ತಪಾಸಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.