(ನ್ಯೂಸ್ ಕಡಬ) newskadaba.com ಮಂಗಳೂರು, ಆ,17: ಅಂತರರಾಜ್ಯ ಸಂಚಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕರ್ನಾಟಕ-ಕೇರಳ ನಡುವಿನ ಗಡಿಯನ್ನು ತೆರೆದಿದೆ. ಪ್ರತಿದಿನ ಸಂಚಾರ ನಡೆಸುವ ಜನರು ತಿಂಗಳ ಪಾಸ್ ಪಡೆಯಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.
ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಡುವೆ ಸಂಪರ್ಕ ಕಲ್ಪಿಸುವ ಎಲ್ಲಾ ಗಡಿಗಳನ್ನು ಜನರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕೋವಿಡ್ 19 ಸೋಂಕಿನ ಭೀತಿ ಹಿನ್ನಲೆಯಲ್ಲಿ ಗಡಿಯನ್ನು ಮುಚ್ಚಲಾಗಿತ್ತು.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ. ವಿ. ರಾಜೇಂದ್ರ ಈ ಕುರಿತು ಮಾಹಿತಿ ನೀಡಿದ್ದಾರೆ. “ಎರಡೂ ರಾಜ್ಯಗಳ ನಡುವೆ ಪ್ರತಿದಿನ ಸಂಚಾರ ನಡೆಸುವ ಜನರು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ, ಪಟ್ಟಣ ಪಂಚಾಯಿತಿಯಿಂದ ತಿಂಗಳ ಪಾಸನ್ನು ಪಡೆಯಬೇಕು” ಎಂದು ಹೇಳಿದ್ದಾರೆ.ಕೇರಳದಿಂದ ದಕ್ಷಿಣ ಕನ್ನಡಕ್ಕೆ ಆಗಮಿಸಿ ವಾಸ್ತವ್ಯ ಹೂಡಲು ಬಯಸುವವರು ಸೇವಾ ಸಿಂಧು ಮೂಲಕ ಪಾಸು ಪಡೆಯಬೇಕು. ತಪಪ್ಪಾಡಿ ಮತ್ತು ಜಲಸೂರು ಚೆಕ್ ಪೋಸ್ಟ್ ಮೂಲಕ ಆಗಮಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಕಾಸರಗೋಡು ಜಿಲ್ಲಾಡಳಿತ ಅಂತರರಾಜ್ಯಗಳ ನಡುವೆ ಸಂಚಾರ ನಡೆಸುವ ಜನರಿಗೆ 21 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದೆ.