(ನ್ಯೂಸ್ ಕಡಬ) newskadaba.com ಮುಂಬೈ, ಜುಲೈ.29.ಮಹಾರಾಷ್ಟ್ರದಲ್ಲಿ ವರ್ಷಧಾರೆ ಮುಂದುವರಿದಿದ್ದು ಸೋಮವಾರವೂ ಮುಂಬೈನ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರವಿವಾರ ಹಾಗೂ ಸೋಮವಾರಕ್ಕೆ ಮುಂಬೈನ ಬಹುತೇಕ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ಗುಡುಗು ಸಹಿತ ಧಾರಾಕಾರ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಕಾರಣ, ಎಲ್ಲರೂ ಅಲರ್ಟ್ ಆಗಿರುವಂತೆ ಬೃಹನ್ಮುಂಬೈ ಮಹಾನಗರ ಪಾಲಿಕೆ ಸೂಚಿಸಿದೆ. ರವಿವಾರದ ಮಳೆಯಿಂದ ಮುರ್ಬಾದ್ ನಿಂದ ಕಲ್ಯಾಣ್‌ಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಯು ಭಾಗಶಃ ಕೊಚ್ಚಿ ಹೋಗಿದೆ.
ಜನರನ್ನು ಆತಂಕಕ್ಕೆ ನೂಕಿರುವ ವರ್ಷಧಾರೆ ಮುಂದುವರಿದಿದ್ದು ಉಲ್ಹಾಸ್ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಬದ್ಲಾಪುರ, ತಿತ್ವಾಲಾ ಮತ್ತು ಕಲ್ಯಾಣ್‌ನಲ್ಲಿ ಪ್ರವಾಹ ಉಂಟಾಗಿದೆ. ಮುರ್ಬಾದ್‌ನಲ್ಲಿ 370 ಮನೆಗಳು ಜಲಾವೃತವಾಗಿವೆ. ಇಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲು ರಕ್ಷಣಾ ಕಾರ್ಯಕರ್ತರು ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿದ್ದಾರೆ. ಒಡಿಶಾದಲ್ಲಿ ಮುಂದಿನ ವಾರ ಭಾರೀ ಮಳೆಯಾಗಲಿದೆ.
ಜಮ್ಮು-ಕಾಶ್ಮೀರದಲ್ಲೂ ಉತ್ತಮ ಮಳೆಯಾಗುತ್ತಿದ್ದು, ಪ್ರತಿಕೂಲ ಹವಾಮಾನ ಹಿನ್ನೆಲೆ ರವಿವಾರ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೂರು ಪ್ರಮುಖ ಬೇಸ್ ಕ್ಯಾಂಪ್‌ಗ್ಳಿಂದ ಹೊರಡಬೇಕಿದ್ದ ಯಾತ್ರಿಕರು ಕ್ಯಾಂಪ್‌ನಲ್ಲೇ ಉಳಿದುಕೊಂಡಿದ್ದಾರೆ. ಅಲ್ಲದೆ ಯಾತ್ರೆಯ ಹಾದಿಯಲ್ಲಿ ದಟ್ಟ ಮಂಜಿನ ಮಳೆ ಉಂಟಾಗುವ ಸಾಧ್ಯತೆಯಿದೆ ಎಂದೂ ಎಚ್ಚರಿಕೆ ನೀಡಲಾಗಿದೆ. ಕಳೆದ 2 ವಾರಗಳಿಂದ ನೇಪಾಳದ ಮಧ್ಯ ಹಾಗೂ ದಕ್ಷಿಣ ಭಾಗದಲ್ಲಿ ಸುರಿದ ಧಾರಾಕಾರ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 113ಕ್ಕೇರಿಕೆಯಾಗಿದೆ. 38 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ77ಜಿಲ್ಲೆಗಳಪೈಕಿ67ರಲ್ಲಿಮಳೆ ಸಂಬಂಧಿ ದುರಂತಗಳು ಸಂಭವಿಸಿವೆ. ಸಂತ್ರಸ್ತರ ಪರಿಹಾರಕ್ಕೆ ನೆರವಾಗುವಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಿಗೂ ಮನವಿ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.