“ವಿಶ್ವ ಕ್ಯಾನ್ಸರ್ ದಿನ” – ಫೆಬ್ರವರಿ 4” ✍? ಡಾ| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ಕಡಬ, ಫೆ.04.ಕ್ಯಾನ್ಸರ್    ರೋಗ ಮನುಕುಲದ ಬಹುದೊಡ್ಡ ಶತ್ರು. ಅನಾದಿ ಕಾಲದಿಂದಲೂ ಈ ರೋಗ ಮನುಕುಲವನ್ನು ಕಾಡುತ್ತಿದೆ. ಅಚ್ಚ ಕನ್ನಡದಲ್ಲಿ ಕ್ಯಾನ್ಸರ್ ರೋಗವನ್ನು ‘ಅರ್ಬುದ ರೋಗ’ ಎಂದು ಕರೆಯಲಾಗುತ್ತದೆ. ‘ಏಡಿ’ ಎಂಬ ಪ್ರಾಣಿಯನ್ನು ‘ಅರ್ಬುದ’ ಎಂದೂ ಕರೆಯಲಾಗುತ್ತದೆ. ಈ ‘ಏಡಿ’ಯ ವಿಶೇಷವೆಂದರೆ ತಾನು ಒಮ್ಮೆ ತನ್ನ ಕದಂಬ ಬಾಹುಗಳಲ್ಲಿ ತನ್ನ ಆಹಾರವನ್ನು ಹಿಡಿದು ಕೊಂಡರೆ ತನ್ನ ಪ್ರಾಣ ಹೋದರೂ ತನ್ನ ಬಾಹುಗಳ ಹಿಡಿತವನ್ನು ಸಡಿಲಿಸುವುದಿಲ್ಲ. ಈ ಕಾರಣದಿಂದಲೇ ಕ್ಯಾನ್ಸರ್ ರೋಗಕ್ಕೆ ‘ಅರ್ಬುದ ರೋಗ’ ಎಂಬ ಅನ್ವರ್ಥ ನಾಮ ಬಂದಿದೆ.

ಕ್ಯಾನ್ಸರ್  ರೋಗ ಅಂದ ಕೂಡಲೇ ನಾವೆಲ್ಲಾ ಒಮ್ಮಲೆ ದಿಗಿಲುಗೊಳ್ಳುತ್ತೇವೆ. ಹಿಂದಿನ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಣಿತ ವೈದ್ಯರ ಸೇವೆ ದುರ್ಲಬವಾಗಿತ್ತು. ಬಡತನ, ಅನಕ್ಷರತೆ ಮತ್ತು ಮೂಲಭೂತ ಸೌಕಾರ್ಯಗಳ ಕೊರತೆಯಿಂದಾಗಿ ರೋಗವನ್ನು ಪತ್ತೆ ಹಚ್ಚುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿರುತ್ತಿತ್ತು. ಆ ಕಾರಣದಿಂದಲೇ’ಕ್ಯಾನ್ಸರ್ ಗುಣಪಡಿಸಲಾಗದ ಖಾಯಿಲೆ ಎಂಬ ಹಣೆಪಟ್ಟಿ ಪಡೆದು ಕೊಂಡಿತು. ಆದರೆ ತಂತ್ರಜ್ಞಾನ ಪರಿಣಿತ ವೈದ್ಯರ ಲಭ್ಯತೆ ಮತ್ತು ಜನರ ತಿಳುವಳಿಕೆಯ ಮಟ್ಟ ಏರಿದಂತೆ ಜನರಲ್ಲಿ ಅರ್ಬುದ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡತೊಡಗಿದೆ ಮತ್ತು ಈಗಿನ ಕಾಲಘಟ್ಟದಲ್ಲಿ  ಕ್ಯಾನ್ಸರ್  ಖಂಡಿತವಾಗಿಯೂ ಗುಣಪಡಿಸಲಾಗದ ಖಾಯಿಲೆಯಲ್ಲ. ಪ್ರಾರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಪರಿಣಾಮಕಾರಿ ಔಷಧಿ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಮುಖವಾಗಬಹುದು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗವನ್ನು ಗೆದ್ದು ಸುಖ ಜೀವನ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಸಮಾಧಾನಕರ ಅಂಶ.

ಅಕ್ಷರತೆ, ಬಡತನ ನಿರ್ಮೂಲನ ಗುಣಮಟ್ಟದ ವ್ಶೆಜ್ಷಾನಿಕ ಪರಿಷ್ಕಾರಗಳು ಮತ್ತು ತಾಂತ್ರಿಕ ಹಾಗೂ ವ್ಶೆಜ್ಞಾನಿಕ ಕೌಶಲತೆಗಳಿಂದ, ಆರಂಭಿಕ ಹಂತದಲ್ಲಿ ಕ್ಯಾನ್ಸರ್ ರೋಗ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಜನರಲ್ಲಿ ರೋಗವನ್ನು ಗುಣಪಡಿಸಬಹುದು ಎಂಬ ಭಾವನೆ ಮೂಡಿಸುವಲ್ಲಿ ವೈದ್ಯಕೀಯ ಜಗತ್ತು ಯಶಸ್ಸು ಕಂಡಿದೆ ಎಂದರೂ ತಪ್ಪಲ್ಲ. ಆದರೂ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಕ್ಯಾನ್ಸರ್    ಇಳಿ ವಯಸ್ಸಿನ ರೋಗವಾಗಿತ್ತು. 60-70ರ ಹರೆಯದಲ್ಲಿ ಕಾಣಿಸಿಕೊಳ್ಳುತ್ತಿದ ರೋಗ, ಈಗೀಗ 30-40 ಹರೆಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ. ವಾತಾವರಣದಲ್ಲಿ ವ್ಯತ್ಯಾಸ ಹವಾಮಾನ ವೈಪರಿತ್ಯ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಕಲುಷಿತಗೊಂಡ ನೀರು, ಗಾಳಿ, ಆಹಾರ ಮತ್ತು ವಿಪರೀತ ಒತ್ತಡದ ಜೀವನದಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಬೀಡಿ, ಸಿಗರೇಟು, ಗುಟ್ಕಾ ಮುಂತಾದ ದುಶ್ಚಟಗಳ ಸಹವಾಸದಿಂದಾಗಿ ಹೆಚ್ಚು ಹೆಚ್ಚು ಯುವಜನತೆ 30-40ರ ಆಸುಪಾಸಿನಲ್ಲಿ ಕ್ಯಾನ್ಸರ್    ರೋಗಕ್ಕೆ ತುತ್ತಾಗುವುದು ಆತಂಕಕಾರಿ ವಿಚಾರವೇ ಸರಿ.

ಕ್ಯಾನ್ಸರ್ರೋಗದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ 2008ರಿಂದ ಪ್ರತಿ ವರ್ಷ ಫೆಬ್ರವರಿ 4 ರಂದು “ಜಾಗತಿಕ ಕ್ಯಾನ್ಸರ್  ದಿನ” ಎಂದು ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ   ಕ್ಯಾನ್ಸರ್ ವಿರೋಧಿ ಸಂಘಟನೆ ಎಂಬ ಸಂಸ್ಥೆಯ ರೀತಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ರೋಗ ತಡೆಗಟ್ಟುವ ಬಗ್ಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಆಚರಣೆಯನ್ನು ಪ್ರತಿ ವರ್ಷನಡೆಸುತ್ತಿದೆ. ಪ್ರಾರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚುವುದು ಮತ್ತು ಪರಿಣಾಮಕರಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಆಚರಣೆಯ ಮೂಲ ಉದ್ದೇಶ.

ಪ್ರತಿ ವರ್ಷ ಯಾವುದಾದರೊಂದು ಅಂಶವನ್ನು ಇದ್ದುಕೊಂಡು ಆಚರಣೆ ಮಾಡಲಾಗುತ್ತಿದೆ. 2015ರ ಆಚರಣೆಯ ದ್ಯೇಯ “NOT BEYOND US” ಅಂದರೆ ಕ್ಯಾನ್ಸರ್ ನಮ್ಮ ಕೈ ಮೀರಿದ ರೋಗವಲ್ಲ ಎಂದು ಒಟ್ಟಿನಲ್ಲಿ ಜನಸಾಮಾನ್ಯರಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸಿ ಕ್ಯಾನ್ಸರ್ ರೋಗ ಮಾರಣಾಂತಿಕ ಅಲ್ಲ ಎಂಬ ಸಂದೇಶವನ್ನು ಸಾರುವ ಸದುದ್ದೇಶ ಆಚರಣೆಯ ಹಿಂದೆ ಇದೆ. ಕೆಲವೊಮ್ಮೆ ರೋಗಕ್ಕಿಂತ ರೋಗದ ಬಗೆಗಿನ ತಪ್ಪು ಕಲ್ಪನೆಯಿಂದಾಗಿ ಹಲವಾರು ವೈಯುಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ನಾಂದಿ ಹಾಡಿ ಅಮೂಲ್ಯ ಜೀವ ಅಕಾಲಿಕ ಸಾವಿನಲ್ಲಿ ಅಂತ್ಯವಾಗುವ ಸಾಧ್ಯತೆಯೂ ಇದೆ. ಇದಕ್ಕಾಗಿಯೇ ರೋಗದ ಬಗ್ಗೆ ಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ವೈದ್ಯರ ಮೇಲೆ ಇದೆ ಎಂದರೂ ತಪ್ಪಲ್ಲ.

Also Read  ನಿಮ್ಮ ರಾಶಿಗೆ ಅನುಗಣವಾಗಿ ನಿಮ್ಮ ಜೀವನದ ಭವಿಷ್ಯ ತಿಳಿದುಕೊಳ್ಳಿ

ಅರ್ಬುದ ರೋಗಕ್ಕೆ ಕಾರಣಗಳು
1. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ
2. ಧೂಮಪಾನ ಮತ್ತು ಮಧ್ಯಪಾನ
3. ಅನುವಂಶೀಯ ಕಾರಣಗಳು
4. ಆರಾಮದಾಯಕ ಜೀವನ ಶೈಲಿ, ಅನಾರೋಗ್ಯಪೂರ್ಣ ಆಹಾರದ ಪದ್ಧತಿ ಮತ್ತು ಒತ್ತಡದ ಜೀವನ ಇತ್ಯಾದಿ
5. ವಿಕಿರಣದ ಮುಖಾಂತರ
6. ಅತಿಯಾದ ಗರ್ಭನಿರೋಧಕ ಮಾತ್ರೆಗಳು ಮತ್ತು ಕೃತಕ ರಸದೂತ ಮಾತ್ರೆಗಳ ಅನಿಯಂತ್ರಿತ ಬಳಕೆ
7. ವಾತಾವರಣದ ವೈಪರೀತ್ಯ, ವಾಯು ಮಾಲಿನ್ಯ, ವೃತ್ತಿ ಸಂಬಂಧಿ ಕ್ಯಾನ್ಸರ್ ಕಾರಕ ವಸ್ತುಗಳ ದೇಹಕ್ಕೆ ಸೇರುವುದರಿಂದ
8. ಅನಾರೋಗ್ಯಕರವಾದ ಲೈಗಿಂಕ ಜೀವನ ಮತ್ತು ಹತ್ತು ಹಲವಾರು ಲೈಗಿಂಕ ಸಂಬಂಧಗಳು, ಹಲವಾರು ಬಾರಿ ಗರ್ಭಧರಿಸುವುದು ಇತ್ಯಾದಿ.
9. ಹೆಪಟೈಟಿಸ್ ಬಿ ಮತ್ತು ಸಿ ವೈರಸ್‍ನ ಸೋಂಕು, ಎಬ್‍ಸ್ಟೈನ್ ಬಾರ್ ವೈರಸ್, ಹ್ಯೂಮನ್ ಪಾಪಿಲೋಮ ವೈರಾಸ್ ಇತ್ಯಾದಿ ವೈರಸ್ ಸೋಂಕಿನಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.

ಬಾಯಿ ಅರ್ಬುದ ರೋಗದ ಚಿಹ್ನೆಗಳು
1. ಪ್ರಾರಂಭಿಕ ಹಂತದಲ್ಲಿ ಖಾರ ಆಹಾರ ಪದಾರ್ಥಗಳನ್ನು ತಿನ್ನುವಾಗ ಬಾಯಿ ಉರಿಯುತ್ತದೆ.
2. ಬಾಯಿಯಲ್ಲಿ ಹುಣ್ಣು ಅಥವಾ ಗಾಯ ಆಗುತ್ತದೆ ಮತ್ತು ಹುಣ್ಣು ಒಣಗುವುದೇ ಇಲ್ಲ
3. ಬಾಯಿಯಲ್ಲಿ ಗಡ್ಡೆ ಬೆಳೆಯುತ್ತದೆ. ಮತ್ತು ಮುಟ್ಟಿದಾಗ ರಕ್ತ ಬರುತ್ತದೆ.
4. ವಿಪರೀತ ನೋವು ಇರುತ್ತದೆ. ಮಾತ್ರೆ ತಿಂದರೂ ನೋವು ನಿವಾರಣೆಯಾಗುವುದಿಲ್ಲ
5. ಬಾಯಿ ತೆರೆಯಲು ಕಷ್ಟವಾಗಬಹುದು. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿ 50 ಮಿ.ಮಿ. ಬಾಯಿ ತೆರೆಯಬಹುದು. ಅರ್ಬುದ ರೋಗದಲ್ಲಿ 20 ಮಿ.ಮಿ. ಗಿಂತ ಜಾಸ್ತಿ ಬಾಯಿ ತೆರೆಯಲು ಕಷ್ಟವಾಗಬಹುದು.
6. ಮಾತಾನಾಡುವಾಗ ಮತ್ತು ಆಹಾರ ಪದಾರ್ಥ ಸೇವಿಸುವಾಗ ತೊಂದರೆ ಮತ್ತು ನೋವು ಆಗಬಹುದು.
7. ಬಾಯಿಯಲ್ಲಿ ಬಿಳಿ ಮತ್ತು ಕೆಂಪುಕಲೆಗಳು ಕಾಣಿಸಿಕೊಳ್ಳಬಹುದು.
8. ನಾಲಗೆಯ ಮೇಲೆ ಗುಳ್ಳೆ ಅಥವಾ ಹುಣ್ಣು ಅಥವಾ ಗಡ್ಡೆಬೆಳೆದು ನಾಲಗೆಯ ಚಲನೆಯಲ್ಲಿ ಕಷ್ಟವಾಗಬಹುದು
9. ಅತಿಯಾದ ಎಂಜಲು (ಜೊಲ್ಲುರಸ) ಬಂದಂತೆ ಅನಿಸುವುದು
10. ಕುತ್ತಿಗೆಯ ಸುತ್ತ ಗಡ್ಡೆ ಅಥವಾ ಗುಳ್ಳೆ ಬೆಳೆದಂತೆ ಅನಿಸಬಹುದು. ಗಡ್ಡೆ ಸುಮಾರು 2ರಿಂದ 10ರ ವರೆಗೆ ಇದ್ದು ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ಆದರೆ ನೋವಿರುವುದಿಲ್ಲ.

ಶ್ವಾಸಕೋಶದ ಕ್ಯಾನ್ಸರ್‍ನ ಚಿಹ್ನೆಗಳು
ಧೂಮಪಾನ ಶ್ವಾಸಕೋಶಗಳ ಬಹುದೊಡ್ಡ ವೈರಿ. ಸಾಮಾನ್ಯವಾಗಿ 60-70ರ ಹರೆಯದಲ್ಲಿ ಕಾಣುವ ಈ ರೋಗ, ಬದಲಾದ ಜೀವನ ಶೈಲಿ ಮತ್ತು ಧೂಮಪಾನದಿಂದಾಗಿ ಈಗೀಗ 30-40ರ ಹರೆಯದಲ್ಲಿ ಕಾಣಸಿಗುತ್ತದೆ. ಶೇಕಡಾ 90ರಷ್ಟು ಮಂದಿ ಧೂಮಪಾನದಿಂದಾಗಿಯೇ ಎದೆಗೂಡಿನ ಕ್ಯಾನ್ಸರ್‍ಗೆ ತುತ್ತಾಗುತ್ತಾರೆ. ಪ್ರಾರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳು ಕಾಣದೇ ಇರಬಹುದು. ಆದರೆ ಮುಂದುವರಿದ ಕ್ಯಾನ್ಸರ್‍ನಲ್ಲಿ ಈ ಕೆಳಗಿನ ಲಕ್ಷಣಗಳು ಹೆಚ್ಚಾಗಿ ಕಾಣಸಿಗುತ್ತದೆ.
1. ವಿಪರೀತ ಮತ್ತು ನಿರಂತರ ಕೆಮ್ಮು ಇದ್ದು ಯಾವುದೇ ರೀತಿಯ ಔಷಧಗಳಿಗೆ ಕಡಿಮೆಯಾಗದೆ, ನಿರಂತರ 4, 5 ವಾರ ಕೆಮ್ಮಿದ್ದಲ್ಲಿ ವೈದ್ಯರ ಸಲಹೆ ಅತೀ ಅಗತ್ಯ.
2. ಕೆಮ್ಮುವಾಗ ರಕ್ತ ವಸರುವುದು, ಕಫದ ಜೊತೆ ರಕ್ತ ಸೂಸುವುದು
3. ಆಹಾರ ಸೇರದಿರುವುದು ಮತ್ತು ಹಸಿವಿಲ್ಲದಿರುವುದು ಇದರಿಂದಾಗಿ ದೇಹದ ತೂಕ ಕಡಿಮೆಯಾಗಬಹುದು
4. ಉಸಿರಾಡಲು ಕಷ್ಟವಾಗಬಹುದು. ಉಸಿರಾಡುವಾಗ ಜೋರಾಗಿ ಶಬ್ಧ ಬರಬಹುದು. ಉಸಿರಾಡುವಾಗ ಎದೆಭಾಗದಲ್ಲಿ ನೋವಾಗಬಹುದು. ದೀರ್ಘವಾದ ಶ್ವಾಸ ತೆಗೆಯಲು ಸಾಧ್ಯವಾಗದೇ ಇರಬಹುದು
5. ಪದೇ ಪದೇ ಆಯಾಸಗೊಳ್ಳುವುದು, ಜೀವನದಲ್ಲಿ ನಿರಾಸಕ್ತಿ ಶ್ವಾಸಕೋಶದಲ್ಲಿ ಆಮ್ಲಜನಕದ ಪೂರೈಕೆ ಮತ್ತು ವಿನಿಮಯವಾಗದಿದ್ದಲ್ಲಿ ಜೀವನದ ಉತ್ಸಹ ಬತ್ತಿಹೋಗಬಹುದು.
6. ಧ್ವನಿಯಲ್ಲಿ ಬದಲಾವಣೆ, ಮುಖದಲ್ಲಿ ಊದಿಕೊಳ್ಳುವುದು ಮತ್ತು ಕರ್ಕಶವಾದ ಧ್ವನಿ ಇತ್ಯಾದಿ ಉಂಟಾಗಬಹುದು
7. ಪದೇ ಪದೇ ಶ್ವಾಸನಾಳದ ಸೋಂಕಿಗೆ ತುತ್ತಾಗಿ ಜ್ವರ ಕಫ, ಕೆಮ್ಮು ಮತ್ತುಧಮ್ಮು ಕಟ್ಟುವುದು ಕೆಚ್ಚಾಗಿ ಕಾಡಬಹುದು.
8. ಎದೆಗೂಡಿನ ಭಾಗದಲ್ಲಿ ನೋವು ಬರಬಹುದು. ಈ ನೋವು ತೋಳು, ಬೆನ್ನು ಮುಂತಾದ ಕಡೆಗೂ ಹರಡಬಹುದು. ಕೆಮ್ಮು ಇಲ್ಲದಿದ್ದರೂ ನಿರಂತರ ನೋವು ಇರಬಹುದು.
ಕ್ಯಾನ್ಸರ್ ರೋಗ ಅಂತಿಮ ಹಂತಕ್ಕೆ ತಲುಪಿದಾಗ, ದೇಹದ ಬೇರೆ ಭಾಗಗಳಿಗೂ ಹರಡಿ ಮೂಳೆಗಳಲ್ಲಿ ನೋವು ಮತ್ತು ಮೂಳೆ ಮುರಿತ ಉಂಟಾಗಬಹುದು ಅದೇ ರೀತಿ ಮೆದುಳಿಗೂ ಹರಡಿದಲ್ಲಿ ತಲೆನೋವು ಅಪಸ್ಮಾರ, ಕೈಕಾಲುಗಳು ಸಂವೇಧನೆ ಮತ್ತು ನಿಯಂತ್ರಣ ಕಳೆದು ಕೊಳ್ಳುವುದು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಇಲ್ಲಿ ಕೂಡಾ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಆದರೆ ಹೆಚ್ಚಿನ ಶ್ವಾಸಕೋಸ ಕ್ಯಾನ್ಸರ್ ಕಡೆ ಹಂತದಲ್ಲಿ ಗುರುತಿಸಲ್ಪಟ್ಟು ವೈದ್ಯರ ಬಳಿ ಬರುವಾಗಲೇ ಕಾಲ ಮಿಂಚಿ ಹೋಗಿರುತ್ತದೆ.

Also Read  ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವವರೇ ಎಚ್ಚರ…!

ತಡೆಗಟ್ಟುವುದು ಹೇಗೆ?
1. ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ವರ್ಜಿಸಬೇಕು. ಗುಟ್ಕಾ, ಪಾನ್‍ಪರಾಗ್ ಮಾಣಿಕ್‍ಚಂದ್ ಮುಂತಾದ ತಂಬಾಕು ಉತ್ಪನ್ನಗಳು ಮನುಕುಲದ ದೊಡ್ಡ ವೈರಿ ಮತ್ತು ಕ್ಯಾನ್ಸರ್ ಕಾರಕ ವಸ್ತುಗಳು. ತಂಬಾಕನ್ನು ಯಾವುದೇ ರೂಪದಲ್ಲಿ ಉಪಯೋಗಿಸುವಂತಿಲ್ಲ
2. ಧೂಮಪಾನ ಖಂಡಿತವಾಗಿಯೂ ಕ್ಯಾನ್ಸರ್ ರೋಗಕ್ಕೆ ಪೂರಕ. ಧೂಮಪಾನ ಮಾಡುವ ಶೇಕಡಾ 70 ಮಂದಿ ಶ್ವಾಸಕೋಶದ ಕ್ಯಾನ್ಸರಿಗೆ ತುತ್ತಾಗುತ್ತಾರೆ.
3. ಮಧ್ಯಪಾನ ವರ್ಜಿಸಬೇಕು. ಧೂಮಪಾನ, ಮಧ್ಯಪಾನ ಮತ್ತು ತಂಬಾಕು ಮೂರು ಕೂಡ ಮನುಕುಲದ ಬಹುದೊಡ್ಡ ವೈರಿ. ಇವು ಮೂರು ಚಟಗಳು ಒಟ್ಟು ಸೇರಿದಲ್ಲಿ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ.
4. ಕೆಲವೊಂದು ಕ್ಯಾನ್ಸರ್ (ವೃಷಣದ ಕ್ಯಾನ್ಸರ್, ಸ್ತನ ಕ್ಯಾನ್ಸರ್) ಅನುವಂಶೀಯವಾಗಿ ಬರುತ್ತದೆ. ಈ ರೀತಿಯ ಚರಿತ್ರೆಯುಳ್ಳವರು ಕಾಲಕಾಲಕ್ಕೆ ವ್ಶೆದ್ಯರಿಂದ ಪರೀಕ್ಷಿಸಿಕೊಳ್ಳಬೇಕು.
5. ಅತಿಯಾದ ರಸದೂತಗಳ ಬಳಕೆ ಮತ್ತು ಅತಿಯಾದ ಗರ್ಭನಿರೋಧಕಗಳ ಬಳಕೆಯಿಚಿದ ಕ್ಯಾನ್ಸರ್ ಬರಲೂ ಬಹುದು. ಅದೇ ರೀತಿ ಅನಾರೋಗ್ಯಕರ ಲೈಂಗಿಕ ಪ್ರಕ್ರಿಯೆಗಳು ಮತ್ತು ಸಂಬಂಧಗಳಿಗೆ ಕಡಿವಾಣ ಹಾಕಲೇಬೇಕು. ಇಲ್ಲವಾದಲ್ಲಿ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ.
6. ಆರೋಗ್ಯಕರವಾದ ಜೀವನ ಕ್ರಮ, ಪರಿಪೂರ್ಣವಾದ ಸಮತೋಲಿನ ಆಹಾರ, ಶಿಸ್ತು ಬದ್ಧವಾದ ನಿರಂತರವಾದ ದೈಹಿಕ ವ್ಯಾಯಾಮಗಳಿಂದ ಕೂಡಿದ ಜೀವನಶೈಲಿ ಮತ್ತು ಒತ್ತಡ ರಹಿತ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು. ಕಲುಷಿತ ವಾತಾವರಣ, ಕಲುಷಿತ ಆಹಾರ ನೀರು ಇತ್ಯಾದಿಗಳಿಂದಲೂ ಕ್ಯಾನ್ಸರ್ ಬರಬಹುದು. ವಿಕಿರಣ ಸೂಸುವ ವಾತಾವರಣ ಮತ್ತು ವೃತ್ತಿ ಸಂಬಂಧಿ ಕ್ಯಾನ್ಸರ್‍ಕಾರಕ (ಸೀಸದ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ) ವಾತಾವರಣವಿದ್ದಲ್ಲಿ ವೃತ್ತಿಯನ್ನು ಬದಲಿಸಿ, ಕ್ಯಾನ್ಸರ್ ಬರದಂತೆ ಎಚ್ಚರ ವಹಿಸಬೇಕು.
7. ಕಾಲಕಾಲಕ್ಕೆ ವೈದ್ಯರ ಬಳಿ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಂಡಲ್ಲಿ ಬಾಯಿ ಕ್ಯಾನ್ಸರ್, ಸ್ತನ್ ಕ್ಯಾನ್ಸರ್, ಸರ್ವಿಕ್ಸ್ ಕ್ಯಾನ್ಸರ್ ಮತ್ತು ಇನ್ನಾವುದೇ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಬಹುದು. ಕ್ಯಾನ್ಸರ್ ರೋಗದ ವಿಚಾರದಲ್ಲಿ ರೋಗದ ಚಿಕಿತ್ಸೆಗಿಂತ ರೋಗವನ್ನು ತಡೆಗಟ್ಟುವಂತೆ ಮುನ್ನೆಚ್ಚರಿಕೆ ವಹಿಸುವುದರಲ್ಲಿಯೇ ಜಾಣತನ ಅಡಗಿದೆ.

ಚಿಕಿತ್ಸೆ ಹೇಗೆ
ಕ್ಯಾನ್ಸರ್ ರೋಗಕ್ಕೆ ಮೂಲಭೂತ ಚಿಕಿತ್ಸೆ ಎಂದರೆ ಕ್ಯಾನ್ಸರ್ ಪೀಡಿತ ಗಡ್ಡೆಯನ್ನು ಸರ್ಜರಿ ಮುಖಾಂತರ ತೆಗೆಯುವುದು. ಪ್ರಾರಂಭಿಕ ಹಂತದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಮುಂದುವರಿದ ಹಂತದಲ್ಲಿ ಸರ್ಜರಿ ಜೊತೆಗೆ ವಿಕಿರಣ ಚಿಕಿತ್ಸೆ ಹಾಗೂ ಕಿಮೋಥೆರಫಿಯ ಅವಶ್ಯಕತೆ ಇರುತ್ತದೆ. ಕೆಲವೊಂದು ಕ್ಯಾನ್ಸರ್‍ಗಳನ್ನು ಕಿಮೋಥೆರಫಿಯಿಂದಲೇ ಗುಣಪಡಿಸಲಾಗುತ್ತದೆ. (ಉದಾಹರಣೆ ಲಿಂಫೋಮ ಎನ್ನುವ ಕ್ಯಾನ್ಸರ್) ಮುಂದುವರಿದ ಹಂತದಲ್ಲಿ ಎಲ್ಲಾ ಮೂರು ರೀತಿಯ ಚಿಕಿತ್ಸೆಯೂ ಬೇಕಾಗಬಹುದು ಮತ್ತು ಚಿಕಿತ್ಸೆಗೆ ಸರಿಯಾದ ರೀತಿಯಲ್ಲಿ ಸ್ಪಂಧಿಸದೇ ಇರಬಹುದು. ಚಿಕಿತ್ಸೆಯ ವಿಧಾನ, ಪ್ರಮಾಣ ಮತ್ತು ಚಿಕಿತ್ಸೆಯ ಸಮಯ ಎಲ್ಲವನ್ನು ವೈದ್ಯರೇ ನಿರ್ಧರಿಸುತ್ತಾರೆ. ವೈದ್ಯರ ಸೂಕ್ತ ಮಾರ್ಗದರ್ಶದಂತೆ ಚಿಕಿತ್ಸೆ ಪಡೆದಲ್ಲಿ ಕ್ಯಾನ್ಸರ್ ರೋಗವನ್ನು ಖಂಡಿತವಾಗಿಯೂ ಪರಿಣಾಮಕಾರಿಯಾಗಿ ಗುಣಪಡಿಸಬಹುದು ಮತ್ತು ಇತರರಂತೆ ನೆಮ್ಮದಿಯ ಜೀವನ ನಡೆಸಬಹುದು ಮತ್ತು ನಡೆಸಿದ ನಿದರ್ಶನಗಳು ನಮ್ಮ ಮುಂದೆಯೇ ಹಲವಾರು ಇದೆ.

Also Read  ಸಾಲಮನ್ನಾ ಇಂದು ಫ್ಯಾಶನ್ ಆಗಿದೆ: ವೆಂಕಯ್ಯ ನಾಯ್ಡು ಲೇವಡಿ

ಅರ್ಬುದ ರೋಗ ಮಾರಣಾಂತಿಕ ರೋಗವಾಗಿದ್ದರೂ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಖಂಡಿತವಾಗಿಯೂ ಗುಣಪಡಿಸಬಹುದು. ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ ರೋಗವನ್ನು ಜಯಿಸಬಹುದು. ಕ್ಯಾನ್ಸರ್ ರೋಗ ಬಂದಿದೆ ಎಂದಾದ ಕೂಡಲೇ ಮನಸಿಕವಾಗಿ ಕುಗ್ಗಿ ಹೋಗಿ ತನ್ನ ದಿನ ಮುಗಿಯಿತು ಎನ್ನುವ ಮನೋಭಾವ ಖಂಡಿತಾ ಸಲ್ಲದು. ಬಡತನ, ಅನಕ್ಷರತೆ, ಅಜ್ಞಾನ, ಮೂಡ ನಂಬಿಕೆಗಳಿಂದ ತುಂಬಿರುವ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್ ರೋಗ ಎರಡನೇ ಅತಿ ದೊಡ್ಡ ರೋಗವಾಗಿ ಹೊರಹೊಮ್ಮಿರುವುದಂತೂ ಸತ್ಯ. (ಹೃದಯಾಘಾತ ಮಾರಣಾಂತಿಕ ಖಾಯಿಲೆಗಳಲ್ಲಿ ಜಾಗತಿಕವಾಗಿ ಮೊದಲನೇ ಸ್ಥಾನದಲ್ಲಿದೆ) ಕ್ಯಾನ್ಸರ್ ಸಾಂಕ್ರಮಿಕ ರೋಗವಲ್ಲದಿದ್ದರೂ, ಅನಾರೋಗ್ಯಕರ ಜೀವನ ಶೈಲಿ. ಒತ್ತಡದ ಬದುಕು, ವಿಪರೀತ ಪೈಪೋಟಿಯ ಜೀವನ ಪದ್ಧತಿ, ಬಿಡುವಿಲ್ಲದ ಅನಿಯಂತ್ರಿತ ಯಾಂತ್ರಿಕ ಬದುಕು, ತಂಬಾಕು ಉತ್ಪನ್ನಗಳ ದುರ್ಬಳಕೆಯಿಂದಾಗಿ ಅರ್ಬುಧ ರೋಗ ಮುನುಕುಲದ ಮೇಲೆ ಮರಣಮೃದಂಗ ಬಾರಿಸುತ್ತಿರುವುದಂತೂ ಸತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವೈದ್ಯ ಮತ್ತು ಪ್ರಜೆಯೂ ತನ್ನ ಹೊಣೆಗಾರಿಕೆ ಅರಿತು ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅರಿವು ಮೂಡಿಸಿ ಕ್ಯಾನ್ಸರ್ ಪೀಡಿತರಿಗೆ ಸಕಾಲದಲ್ಲಿ ಸಾಂತ್ವನ ನೀಡಿ ಚಿಕಿತ್ಸೆ ದೊರಕಿಸಿ ನೀಡಿ ಮತ್ತು ಮಾನಸಿಕ ಧೈರ್ಯ ತುಂಬಿದಲ್ಲಿ ಅರ್ಬುದ ರೋಗವನ್ನು ಜಯಿಸಬಹುದು. ಅದರಲ್ಲಿಯೇ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದ ಒಳಿತು ಮತ್ತು ಭವಿಷ್ಯ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು
ಮೊ : 09845135787

error: Content is protected !!
Scroll to Top