
(ನ್ಯೂಸ್ ಕಡಬ) newskadaba.com, ಅ. 15 . ಎನ್ಎಂಸಿ ಹೆಲ್ತ್ಕೇರ್ ಸಂಸ್ಥಾಪಕ ಹಾಗೂ ಭಾರತೀಯ ಮೂಲದ ಪ್ರಮುಖ ಉದ್ಯಮಿ ಬಿ.ಆರ್. ಶೆಟ್ಟಿ ಅವರು ಬ್ಯಾಂಕ್ ಆಫ್ ಬರೋಡಾ ಹಾಗೂ ಕೆಲ ಅಧಿಕಾರಿಗಳ ವಿರುದ್ಧ ಬೃಹತ್ ಮೊತ್ತದ ಮೊಕದ್ದಮೆ ದಾಖಲಿಸಿದ್ದಾರೆ.ವಂಚನೆ ಮತ್ತು ಅಕ್ರಮ ವಹಿವಾಟುಗಳಿಂದ ತಮಗೆ ಹಾಗೂ ತಮ್ಮ ಸಂಸ್ಥೆಗಳಿಗೆ ಉಂಟಾಗಿರುವ ನಷ್ಟಕ್ಕೆ ಒಟ್ಟು 15 ಬಿಲಿಯನ್ ಡಾಲರ್ ನಷ್ಟ ಪರಿಹಾರ ಹಾಗೂ ವಾರ್ಷಿಕ ಶೇ. 18ರಷ್ಟು ಬಡ್ಡಿ ನೀಡುವಂತೆ ಕೋರಿದ್ದಾರೆ.
ಗ್ರೂಪ್ ಕಂಪನಿಗಳ ಅಕ್ರಮ ಹಣ ವರ್ಗಾವಣೆಗೆ ಬ್ಯಾಂಕ್ ಅವಕಾಶ ಕಲ್ಪಿಸಿದೆ ಮತ್ತು ತಮ್ಮ ಸಹಿಯನ್ನು ನಕಲು ಮಾಡಿ ಪರ್ಸನಲ್ ಗ್ಯಾರಂಟಿ ಪಡೆದು ಸಾಲ ಮಾಡಲಾಗಿದೆ ಎಂದು ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಈ ಸುದ್ದಿಯ ಬೆನ್ನಲ್ಲೇ ಬ್ಯಾಂಕ್ ಆಫ್ ಬರೋಡಾದ ಷೇರು ಮೌಲ್ಯ ಶೇ. 3ರಷ್ಟು ಕುಸಿದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್, ತಮಗೆ ಇನ್ನೂ ಯಾವುದೇ ಅಧಿಕೃತ ನೋಟಿಸ್ ತಲುಪಿಲ್ಲವೆಂದೂ, ಕೋರ್ಟ್ನಲ್ಲಿ ಕಾನೂನುಬದ್ಧವಾಗಿ ಸಮರ್ಥವಾಗಿ ಎದುರಿಸುವುದಾಗಿ ಸ್ಪಷ್ಟಪಡಿಸಿದೆ.




