
(ನ್ಯೂಸ್ ಕಡಬ) newskadaba.com, ಅ. 15 . ಚಲಿಸುತ್ತಿದ್ದ ಕಾರೊಂದರಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡ ಘಟನೆ ಕಾಸರಗೋಡಿನ ಉಪ್ಪಳದಲ್ಲಿ ನಡೆದಿದೆ. ಕನ್ನಾಡಿಪಾರ ನಿವಾಸಿ ಜಾಸ್ಮಿನ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು, ಅವರು ಉಪ್ಪಳದ ಕೈಕಂಬದ ಕಡೆಗೆ ಪ್ರಯಾಣಿಸುತ್ತಿದ್ದರು. ಸೋಂಕಾಲ್ ಮಸೀದಿ ಬಳಿ ತಲುಪಿದಾಗ ಕಾರಿನ ಮುಂಭಾಗದ ಬಾನೆಟ್ ನಿಂದ ದಟ್ಟ ಹೊಗೆ ಏಳುತ್ತಿರುವುದನ್ನು ರಸ್ತೆಯಲ್ಲಿದ್ದ ಸಾರ್ವಜನಿಕರು ಗಮನಿಸಿದ್ದಾರೆ.
ತಕ್ಷಣವೇ ಸಾರ್ವಜನಿಕರು ಕೈ ತೋರಿಸಿ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಚಾಲಕ ಕಾರು ನಿಲ್ಲಿಸಿ ಬಾನೆಟ್ ತೆರೆದು ನೋಡಿದಾಗ ಒಳಗಡೆ ಬೆಂಕಿ ಹೊತ್ತಿ ಉರಿಯುತ್ತಿರುವುದು ಕಂಡುಬಂದಿದೆ. ವಿಷಯ ತಿಳಿದ ತಕ್ಷಣ ಉಪ್ಪಳದ ಅಗ್ನಿಶಾಮಕ ದಳದ ಹಿರಿಯ ಸ್ಟೇಷನ್ ಅಧಿಕಾರಿ ಸಂತೋಷ್, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅದಾಗ್ಯೂ, ಕಾರಿನ ಇಂಜಿನ್ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ನಿಖರವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.




