ಕೊಂಕಣ ರೈಲ್ವೆ ಸೇರಿ ರಾಜ್ಯದ ರೈಲು ಮಾರ್ಗ ಅಭಿವೃದ್ಧಿಗೆ 9,000 ಕೋಟಿ ರೂ. ಅನುದಾನ ಮಂಜೂರು: ಸಚಿವ ವಿ. ಸೋಮಣ್ಣ

(ನ್ಯೂಸ್‌ ಕಡಬ) newskadaba.com, ಅ.13. ರಾಜ್ಯದ ರೈಲ್ವೆ ಕ್ಷೇತ್ರದ ಸಮಗ್ರ ವಿಕಾಸ ಹಾಗೂ ಕರಾವಳಿ-ಮಲೆನಾಡು ಭಾಗದ ಸಂಪರ್ಕವನ್ನು ಮತ್ತಷ್ಟು ಕವಲುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.

ಕೊಂಕಣ ರೈಲ್ವೆಯ ಮುಂದುವರಿದ ಅಭಿವೃದ್ಧಿ ಕಾಮಗಾರಿಗಳು ಹಾಗೂ ರಾಜ್ಯದ ಇತರ ರೈಲ್ವೆ ಯೋಜನೆಗಳ ಪ್ರಗತಿಗಾಗಿ ಬರೋಬ್ಬರಿ 9,000 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ರಾಜ್ಯದಲ್ಲಿ ಪ್ರಸ್ತುತ ಸುಮಾರು 52,000 ಕೋಟಿ ರೂ. ವೆಚ್ಚದಲ್ಲಿ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಮಾಹಿತಿ ನೀಡಿದರು.

ಮಲೆನಾಡು ಹಾಗೂ ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆಗಳಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ದಶಕಗಳಿಂದ ನನೆಗುದಿಗೆ ಬಿದ್ದಿರುವ ಮತ್ತು ಪ್ರಗತಿಯಲ್ಲಿರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸ್ಪಷ್ಟ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.

ಇದೇ ವೇಳೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ ಮಾಡಿರುವ ಸಚಿವರು, ಈ ಹಿಂದಿನ ಗುತ್ತಿಗೆದಾರರ ಲೋಪ ಹಾಗೂ ವಿಳಂಬ ಧೋರಣೆಯಿಂದಾಗಿ ಹಳೆಯ ಟೆಂಡರ್ ಅನ್ನು ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಮುಂಬರುವ ಎರಡು ತಿಂಗಳ ಒಳಗಾಗಿ ಹೊಸದಾಗಿ ಟೆಂಡರ್ ಕರೆಯಲಾಗುವುದು ಹಾಗೂ ಕಾಮಗಾರಿಗಳಿಗೆ ವೇಗ ನೀಡಲಾಗುವುದು ಎಂದು ಭರವಸೆ ನೀಡಿದರು.

Scroll to Top