14 ಬೋಗಿಗಳು ಹಳಿತಪ್ಪಿ 4 ಮೃತ್ಯು, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com, ಅ.13. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಸಮೀಪ ಮಂಗಳವಾರ ಮುಂಜಾನೆ ಭೀಕರ ರೈಲು ದುರಂತ ಸಂಭವಿಸಿದೆ.ಕರಾಚಿಯಿಂದ ಪೇಶಾವರಕ್ಕೆ ತೆರಳುತ್ತಿದ್ದ ‘ರೆಹಮಾನ್ ಬಾಬಾ ಎಕ್ಸ್ಪ್ರೆಸ್’ ಪ್ಯಾಸೆಂಜರ್ ರೈಲಿನ ಎಲ್ಲಾ 14 ಬೋಗಿಗಳು ಶೇರ್ ಶಾ ಸೇತುವೆಯ ಬಳಿ ಹಳಿತಪ್ಪಿ ಬಿದ್ದ ಪರಿಣಾಮ ಕನಿಷ್ಠ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆ 5:15 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ರಕ್ಷಣಾ ತಂಡಗಳು ಗಾಯಾಳುಗಳನ್ನು ಮುಲ್ತಾನ್ನ ನಿಶ್ತಾರ್ ಆಸ್ಪತ್ರೆಗೆ ದಾಖಲಿಸಿವೆ.
ಸ್ಥಳೀಯ ಪತ್ರಿಕೆ ‘ಡಾನ್’ ಜತೆ ಮಾತನಾಡಿದ ಲೋಕೋ ಪೈಲಟ್ ರಿಜ್ವಾನ್ ಅಬ್ಬಾಸ್ ದುರಂತದ ಕ್ಷಣವನ್ನು ವಿವರಿಸಿದ್ದಾರೆ. ಸಿಗ್ನಲ್ ಗ್ರೀನ್ ಇತ್ತು ಮತ್ತು ಸ್ಪಷ್ಟವಾಗಿತ್ತು. ರೈಲು ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿತ್ತು. ಶೇರ್ ಶಾ ನಿಲ್ದಾಣದ ಪ್ರದೇಶವನ್ನು ದಾಟುತ್ತಿದ್ದಂತೆ ರೈಲಿನಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಆಘಾತ ಮತ್ತು ತಳ್ಳುವಿಕೆಯ ಅನುಭವವಾಯಿತು. ನಾನು ತಕ್ಷಣ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದೆ. ಎಂಜಿನ್ನಿಂದ ಕೆಳಗಿಳಿದು ನೋಡಿದಾಗ ಹಿಂದಿನ ಎಲ್ಲಾ ಬೋಗಿಗಳು ಹಳಿ ಬಿಟ್ಟು ಬದಿಗೆ ಉರುಳಿ ಬಿದ್ದಿದ್ದವು ಎಂದು ಚಾಲಕ ತಿಳಿಸಿದ್ದಾರೆ.
14 ಬೋಗಿಗಳಿಂದ ರಕ್ಷಣೆ: ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಸಿಬ್ಬಂದಿ ಮತ್ತು ಅರೆವೈದ್ಯಕೀಯ ತಂಡಗಳು ಹಳಿತಪ್ಪಿದ ಬೋಗಿಗಳಿಂದ ಪ್ರಯಾಣಿಕರನ್ನು ಹೊರತೆಗೆದಿದ್ದಾರೆ. 13 ಬೋಗಿಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದ್ದು, ಕೊನೆಯ ಬೋಗಿಯ ತೆರವು ಕಾರ್ಯ ಮುಂದುವರೆದಿದೆ.ಉನ್ನತ ಮಟ್ಟದ ತನಿಖೆ: ರೈಲ್ವೆ ಸಚಿವ ಹನೀಫ್ ಅಬ್ಬಾಸಿ ಪ್ರತಿಕ್ರಿಯಿಸಿ, ಘಟನೆಯ ನಿಖರ ಕಾರಣ ಪತ್ತೆಹಚ್ಚಲು ಫೆಡರಲ್ ಸರ್ಕಾರಿ ರೈಲ್ವೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.




