
(ನ್ಯೂಸ್ ಕಡಬ) newskadaba.com, ಅ.13 .ಮುಂಬೈ ಪೊಲೀಸ್ ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳೆಂದು ಹೇಳಿಕೊಂಡು ವಂಚಕರು ನಡೆಸಿದ ಅತ್ಯಾಧುನಿಕ ‘ಡಿಜಿಟಲ್ ಅರೆಸ್ಟ್’ ಸೈಬರ್ ವಂಚನೆಯಲ್ಲಿ ಪುತ್ತೂರು ತಾಲ್ಲೂಕಿನ ವ್ಯಕ್ತಿಯೊಬ್ಬರಿಗೆ 1.31 ಕೋಟಿ ರೂ. ವಂಚಿಸಿದ್ದಾರೆ.
ದೂರಿನ ಪ್ರಕಾರ, ವಂಚನೆಗೆ ಒಳಗಾದ ವ್ಯಕ್ತಿಯನ್ನು ವಂಚಕರು ಸಂಪರ್ಕಿಸಿ ಪಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಬಂಧನದ ಭೀತಿ ಹುಟ್ಟಿಸಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಿಸಿದ್ದಾರೆ.
ಆರೋಪಿಗಳು ವಾಟ್ಸ್ಪ್ ವಿಡಿಯೋ ಕರೆಗಳ ಮೂಲಕ ನಿರಂತರವಾಗಿ ಬೆದರಿಸಿ, ಬ್ಯಾಂಕ್ ಖಾತೆಗಳ ಪರಿಶೀಲನೆ ಮತ್ತು ಹಣದ ದೃಢೀಕರಣದ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ RTGS ಮೂಲಕ ಹಣ ವರ್ಗಾಯಿಸುವಂತೆ ಸೂಚಿಸಿದ್ದಾರೆ.
ಇದನ್ನು ನಂಬಿದ ದೂರುದಾರರು , ಸೆಪ್ಟೆಂಬರ್ 2 ಮತ್ತು ಅಕ್ಟೋಬರ್ 6 ರ ನಡುವೆ ಹಂತ ಹಂತವಾಗಿ ಕಂತುಗಳಲ್ಲಿ 1,31,50,000 ರೂ.ಗಳನ್ನು ವರ್ಗಾಯಿಸಿದ್ದಾರೆ.ನಂತರ ಇದು ಸೈಬರ್ ವಂಚನೆ ಎಂಬುದನ್ನು ಅರಿತ ದೂರುದಾರರು ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ.
ಅವರ ದೂರಿನ ಆಧಾರದ ಮೇಲೆ, ದಕ್ಷಿಣ ಕನ್ನಡ (ಅಪರಾಧ ಸಂಖ್ಯೆ 42/2026) ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ (ಸಿಸಿಪಿಎಸ್) ಐಟಿ ಕಾಯ್ದೆಯ ಸೆಕ್ಷನ್ 66(ಸಿ) ಮತ್ತು 66(ಡಿ) ಅಡಿಯಲ್ಲಿ, ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 126(2), 204, 308(6), 318(4), 319(2), ಮತ್ತು 351 ಆರ್/ಡಬ್ಲ್ಯೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ವಂಚಕರ ಜಾಲದ ಕುರಿತು ಹೆಚ್ಚಿನ ತನಿಖೆ ಪ್ರಸ್ತುತ ನಡೆಯುತ್ತಿದೆ.




