
(ನ್ಯೂಸ್ ಕಡಬ) newskadaba.com, ಅ.09 . ಮಂಗಳೂರು: ಕರಾವಳಿಯಲ್ಲಿ ಹೊಸ ಮೀನುಗಾರಿಕಾ ಋತು ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಪ್ರತಿಕೂಲ ಹವಾಮಾನದ ನಡುವೆಯೂ ಮಂಗಳೂರಿನಲ್ಲಿ ತೃಪ್ತಿದಾಯಕ ಮೀನು ಇಳುವರಿ ದಾಖಲಾಗಿದೆ.
ಆಗಸ್ಟ್‌ನಲ್ಲಿ 18,000 ಮೆಟ್ರಿಕ್ ಟನ್ ಹಾಗೂ ಸೆಪ್ಟೆಂಬರ್‌ನಲ್ಲಿ 25,200 ಮೆಟ್ರಿಕ್ ಟನ್ ಸೇರಿ ಒಟ್ಟು 43,200 ಮೆಟ್ರಿಕ್ ಟನ್ ಮೀನು ಲಭ್ಯವಾಗಿದೆ.ಪರ್ಸಿನ್ ಬೋಟ್‌ಗಳಿಗೆ ಬೂತಾಯಿ, ಬಂಗುಡೆ ಸಿಗುತ್ತಿದ್ದರೆ, ಟ್ರಾಲ್ ಬೋಟ್‌ಗಳಿಗೆ ಕಪ್ಪೆ ಬೊಂಡಾಸ್, ಡಿಸ್ಕೋ, ಮುರು ಹಾಗೂ ಪಾಂಬೋಲ್ ಲಭ್ಯವಾಗುತ್ತಿವೆ. ಸಣ್ಣ ದೋಣಿಗಳಿಗೆ ಸಿಗಡಿ ಮತ್ತು ಮಾಂಜಿ ಮೀನುಗಳು ದೊರೆಯುತ್ತಿವೆ.
2024-25ರಲ್ಲಿ ₹2,220 ಕೋಟಿ ಮೌಲ್ಯದ (1,71,795 ಟನ್) ಮೀನು ದೊರೆತಿದ್ದರೆ, 2025-26ರಲ್ಲಿ ₹3,856 ಕೋಟಿ ಮೌಲ್ಯದ (1,97,381 ಟನ್) ಮೀನು ಲಭ್ಯವಾಗಿ ಏರಿಕೆ ಕಂಡಿದೆ.ಮುಂದಿನ 2-3 ತಿಂಗಳುಗಳು ಇದೇ ರೀತಿ ಮುಂದುವರಿದರೆ ಉತ್ತಮ ಮೀನುಗಾರಿಕಾ ಋತುವಾಗಲಿದೆ ಎಂದು ಮೀನುಗಾರರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.




