
(ನ್ಯೂಸ್ ಕಡಬ) newskadaba.com, ಅ.09 ಕನ್ನಡ ಚಿತ್ರರಂಗದ ಹಿರಿಯ ನಟ ಮತ್ತು ರಾಜಕಾರಣಿಯೂ ಆಗಿದ್ದ ಅಂಬರೀಶ್ ಅವರಿಗೆ ‘ಕರ್ನಾಟಕ ರತ್ನ’ ನೀಡುವಂತೆ ಸಚಿವ ರಾಮಲಿಂಗ ರೆಡ್ಡಿ ಅವರು ಒತ್ತಾಯಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಬೆಳ್ಳಿ ತೆರೆಯ ಮೇಲಿನ ‘ರೆಬೆಲ್ ಸ್ಟಾರ್’, ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಅಚ್ಚುಮೆಚ್ಚಿನ ‘ಮಂಡ್ಯದ ಗಂಡು’ ಡಾ. ಅಂಬರೀಶ್ ನಮ್ಮೆಲ್ಲರ ನೆನಪಿನಲ್ಲಿ ಸದಾ ಅಮರ. ಕನ್ನಡ ನಾಡು, ನುಡಿ, ಕಲೆ ಹಾಗೂ ರಾಜಕೀಯ ರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ.
ಅಭಿಮಾನಿಗಳ ಆಶಯದಂತೆ ಮತ್ತು ಅವರ ಜನಪ್ರಿಯತೆಯನ್ನು ಗುರುತಿಸಿ, ಮುಂಬರುವ ರಾಜ್ಯೋತ್ಸವದ ವೇಳೆಗೆ ಅವರಿಗೆ ‘ಕರ್ನಾಟಕ ರತ್ನ’ (ಮರಣೋತ್ತರವಾಗಿ) ಪ್ರಶಸ್ತಿ ನೀಡಿ ಗೌರವಿಸಬೇಕೆಂದು ನಾನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅಂಬರೀಶ್ ಅವರಿಗೆ ಸಲ್ಲಬೇಕಾದ ಈ ಗೌರವ ನಾಡಿನ ಪ್ರತಿಯೊಬ್ಬ ಕನ್ನಡಿಗನ ಗೌರವವಾಗಿದೆ” ಎಂದು ತಿಳಿಸಿದ್ದಾರೆ.
“ಅಂಬರೀಶ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ ‘ರೆಬೆಲ್ ಸ್ಟಾರ್’ ಆಗಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಚಿತ್ರರಂಗದ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಮತ್ತು ಕಲಾವಿದರ ಹಿತ ಕಾಯುವಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿದ್ದರು. ರಾಜಕೀಯ ರಂಗದಲ್ಲೂ ಶಾಸಕರಾಗಿ, ಸಂಸದರಾಗಿ, ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ನಾಡಿನ ಅಭಿವೃದ್ಧಿಗೆ, ವಿಶೇಷವಾಗಿ ಮಂಡ್ಯ ಹಾಗೂ ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗೆ ಸದಾ ಶ್ರಮಿಸಿದ್ದಾರೆ. ಆದ್ದರಿಂದ, ಮುಂಬರುವ ರಾಜ್ಯೋತ್ಸವ ಅಥವಾ ಸೂಕ್ತ ಸಂದರ್ಭದಲ್ಲಿ ಶ್ರೀ ಎಂ. ಹೆಚ್. ಅಂಬರೀಶ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಿಸಿ ಗೌರವಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿದೆ” ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.




