ಮಂಗಳೂರಿನಲ್ಲಿ ಭಾರಿ ಸೈಬರ್ ಫ್ರಾಡ್: ಡಿಜಿಟಲ್ ಅರೆಸ್ಟ್ ನೆಪದಲ್ಲಿ 75 ವರ್ಷದ ವೃದ್ಧೆಗೆ 2 ಕೋಟಿ ರೂ. ವಂಚನೆ!

(ನ್ಯೂಸ್‌ ಕಡಬ) newskadaba.com, ಅ.09 ಸಿಬಿಐ, ಪೊಲೀಸ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹೆಸರಲ್ಲಿ ಕರೆ ಮಾಡಿ 75 ವರ್ಷದ ವೃದ್ಧೆಯೊಬ್ಬರನ್ನು ಹೆದರಿಸಿ, ಭಾರಿ ಪ್ರಮಾಣದ ‘ಡಿಜಿಟಲ್ ಅರೆಸ್ಟ್’ ವಂಚನೆ ಎಸಗಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸೈಬರ್ ಚೋರರು ಮಹಿಳೆಯಿಂದ ಭರ್ಜರಿ 2 ಕೋಟಿ ರೂಪಾಯಿ ದೋಚಿದ್ದು, ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 25ರಂದು ಮಹಿಳೆಗೆ ಕರೆ ಮಾಡಿದ ಅಪರಿಚಿತರು, ತಾವು ಮುಂಬೈ ಪೊಲೀಸರು ಹಾಗೂ ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು. ಅಂತರರಾಷ್ಟ್ರೀಯ ಮನಿ ಲ್ಯಾಂಡರಿಂಗ್, ಡ್ರಗ್ಸ್ ಹಾಗೂ ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ನಿಮ್ಮ ಹೆಸರಿದೆ ಎಂದು ಬೆದರಿಸಿದ್ದರು.

ಪ್ರಕರಣದಿಂದ ಮುಕ್ತಿ ನೀಡುವ ನೆಪದಲ್ಲಿ ಬ್ಯಾಂಕ್ ಖಾತೆ ಹಾಗೂ ಆಸ್ತಿ ವಿವರಗಳನ್ನು ಪಡೆದುಕೊಂಡು, ‘ನ್ಯಾಷನಲ್ ಸೀಕ್ರೆಸಿ ಆಕ್ಟ್’ ಹೆಸರಲ್ಲಿ ಯಾರಿಗೂ ತಿಳಿಸದಂತೆ ಹೆದರಿಸಿದ್ದರು.ಆರೋಪಿಗಳ ಮಾತು ನಂಬಿದ ವೃದ್ಧೆ, ಸೆ.25 ರಿಂದ ಅ.5ರ ನಡುವೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ ಒಟ್ಟು 2 ಕೋಟಿ ರೂ. ವರ್ಗಾಯಿಸಿದ್ದರು. ಕೊನೆಗೆ ಗೆಳೆಯರ ಬಳಿ ವಿಚಾರ ತಿಳಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.

Scroll to Top