(ನ್ಯೂಸ್ ಕಡಬ) newskadaba.com, ಅ.06 ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನಡುರಾತ್ರಿ ಸುಮಾರು 2 ಗಂಟೆಗೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದಕ್ಕಾಗಿ ತಡರಾತ್ರಿ ನಗರಕ್ಕೆ ಆಗಮಿಸಿದ್ದ ಸಚಿವರು, ಆಸ್ಪತ್ರೆಯ ಜನರಲ್ ವಾರ್ಡ್, ಐಸಿಯು ಹಾಗೂ ಶೌಚಾಲಯಗಳಿಗೆ ಭೇಟಿ ನೀಡಿ ಸ್ವಚ್ಛತೆ ಮತ್ತು ವ್ಯವಸ್ಥೆಗಳನ್ನು ವೀಕ್ಷಿಸಿದರು. ಬಳಿಕ ಹಾಜರಾತಿ ಪುಸ್ತಕ ಪರಿಶೀಲಿಸಿ, ವೈದ್ಯರಿಂದ ರೋಗಿಗಳ ಚಿಕಿತ್ಸೆ ಮತ್ತು ಕಾರ್ಯವೈಖರಿಯ ಮಾಹಿತಿ ಪಡೆದರು.
ಈ ವೇಳೆ, ಆಸ್ಪತ್ರೆಯಲ್ಲಿ ಔಷಧಿಗಳು ಲಭ್ಯವಿದ್ದರೂ ರೋಗಿಗಳಿಗೆ ಹೊರಗಿನ ಮೆಡಿಕಲ್‌ಗಳಿಂದ ಔಷಧಿ ಖರೀದಿಸಲು ಚೀಟಿ ಬರೆದುಕೊಡುತ್ತಿರುವುದು ಸಚಿವರ ಗಮನಕ್ಕೆ ಬಂದಿದೆ. ಇದರಿಂದ ಆಕ್ರೋಶಗೊಂಡ ಯು.ಟಿ. ಖಾದರ್, “ಉಚಿತ ಸೌಲಭ್ಯಗಳಿದ್ದರೂ ಸಾರ್ವಜನಿಕರಿಗೆ ಹೊರಗಿನಿಂದ ಔಷಧಿ ತರಲು ಹೇಳುತ್ತಿರುವುದೇಕೆ?” ಎಂದು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಲಭ್ಯವಿರುವ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.




