
(ನ್ಯೂಸ್ ಕಡಬ) newskadaba.com, ಅ.05 . ಗ್ರಾಹಕರನ್ನು ಡ್ರಾಪ್ ಮಾಡಿ ಕಾರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಕ್ಯಾಬ್ ಚಾಲಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಪ್ಪ ಸರ್ಕಲ್ ಬಳಿ ನಡೆದಿದೆ.
ಬೆಂಗಳೂರಿನ ಕೆ.ಪಿ. ಅಗ್ರಹಾರ ಮೂಲದ ಪುಷ್ಪರಾಜ್ (29) ಮೃತಪಟ್ಟ ಚಾಲಕ. ತಾವರೆಕೆರೆ ವ್ಯಾಪ್ತಿಗೆ ಸವಾರರನ್ನು ತಲುಪಿಸಿದ ನಂತರ, ಚಂದ್ರಪ್ಪ ಸರ್ಕಲ್ ಸಮೀಪದ ಲೇಔಟ್ನಲ್ಲಿ ಕಾರು ಪಾರ್ಕ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರೆನ್ನಲಾಗಿದೆ. ಆದರೆ, ಬೆಳಿಗ್ಗೆಯಿಂದಲೂ ಕಾರು ಒಂದೇ ಸ್ಥಳದಲ್ಲಿ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಪರಿಶೀಲಿಸಿದಾಗ, ಕಾರಿನೊಳಗೆ ಚಾಲಕ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




