AI ತಂತ್ರಜ್ಞಾನ ಬಳಸಿ ನಕಲಿ ಹಾಲ್ ಟಿಕೆಟ್ ಸೃಷ್ಟಿ: ಕಡಬದ ಯುವಕ ಮಂಗಳೂರಿನಲ್ಲಿ ಬಂಧನ

(ನ್ಯೂಸ್‌ ಕಡಬ) newskadaba.com, ಅ.02 . ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ AI ತಂತ್ರಜ್ಞಾನ ಬಳಸಿ ನಕಲಿ ಪ್ರವೇಶ ಪತ್ರ ಸೃಷ್ಟಿಸಿ ವಂಚಿಸಲು ಯತ್ನಿಸಿದ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಯಜೇಶ್ ಬಿ.ಜೆ. ರೈ (22) ಎಂಬಾತನನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 28 ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ CPC-2026ರ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆ ನಡೆಯುತ್ತಿತ್ತುಆರೋಪಿ ಹಾಜರುಪಡಿಸಿದ ಹಾಲ್ ಟಿಕೆಟ್ (ಸಂಖ್ಯೆ: CPC5225446) ಸಂಖ್ಯೆಯನ್ನು KEA ತಂತ್ರಾಂಶದಲ್ಲಿ ಪರಿಶೀಲಿಸಿದಾಗ 1:5 ಅರ್ಹತಾ ಪಟ್ಟಿಯಲ್ಲಿ ಆತನ ಹೆಸರಿರಲಿಲ್ಲ. ಇದರಿಂದ ಅನುಮಾನಗೊಂಡು ತನಿಖೆ ನಡೆಸಿದಾಗ ಕೃತ್ಯ ಬಯಲಾಗಿದೆ.

ಲಿಖಿತ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ ಆರೋಪಿ, ಅರ್ಹತೆ ಪಡೆದಿದ್ದ ಮತ್ತೊಬ್ಬ ಅಭ್ಯರ್ಥಿಯ ಅಸಲಿ ಹಾಲ್ ಟಿಕೆಟ್ ಪಡೆದು AI ತಂತ್ರಜ್ಞಾನದ ಮೂಲಕ ತನ್ನ ಹೆಸರು ಹಾಗೂ ವಿವರಗಳನ್ನು ಎಡಿಟ್ ಮಾಡಿ ನಕಲಿ ಪ್ರವೇಶ ಪತ್ರ ಸೃಷ್ಟಿಸಿದ್ದನು.ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಎಡಿಟಿಂಗ್‌ಗೆ ಸಂಬಂಧಿಸಿದ ನೇರ ಡಿಜಿಟಲ್ ಪುರಾವೆಗಳು ಪತ್ತೆಯಾಗಿವೆ.

ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪ್ರಕಾಶ್ ರುದ್ರಪ್ಪ ಹೂವಿನ ಅವರ ದೂರಿನಂತೆ, ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ BNS 2023ರ ಕಲಂ 336(1), 336(3) (ನಕಲಿ ದಾಖಲೆ ಸೃಷ್ಟಿ) ಹಾಗೂ 318(4) (ವಂಚನೆ) ಅಡಿಯಲ್ಲಿ ಪ್ರಕರಣ (ಅಪರಾಧ ಸಂಖ್ಯೆ: 87/2026) ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Scroll to Top