
(ನ್ಯೂಸ್ ಕಡಬ) newskadaba.com, ಸೆ. 16. ಬೆಳ್ತಂಗಡಿಯಲ್ಲಿ ಮನೆಯೊಂದಕ್ಕೆ ನುಗ್ಗಿ 15.82 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು; ಪ್ರಕರಣ ದಾಖಲುಮನೆಯವರು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಸುಮಾರು 15.82 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲದಲ್ಲಿ ನಡೆದಿದೆ.ಆಲಂದಿಲ ನಿವಾಸಿ ನೌಫಾಲ್ ಬಿ.ಎಂ. (34) ಎಂಬವರು ನೀಡಿದ ದೂರಿನಂತೆ ಸೆ. 13 ರಂದು ಮಧ್ಯಾಹ್ನ ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಕಳುಹಿಸಿದ ಬಳಿಕ ನೌಫಾಲ್ ಕೂಡ ಮನೆಗೆ ಬೀಗ ಹಾಕಿ ತರಕಾರಿ ವ್ಯಾಪಾರದ ಕೆಲಸಕ್ಕಾಗಿ ಬೆಳ್ತಂಗಡಿಗೆ ತೆರಳಿದ್ದರು.
ಸೆ. 14ರಂದು ವಯರಿಂಗ್ ಕೆಲಸಕ್ಕಾಗಿ ಕಾರ್ಮಿಕರನ್ನು ಮನೆಗೆ ಕರೆಸಲಾಗಿತ್ತು. ಮದ್ದಡ್ಕದ ಫಾರೂಕ್ ಎಂಬವರು ಕುದ್ರಡ್ಕದ ಅಶ್ರಫ್ ಹಾಗೂ ಶಿರ್ಲಾಲಿನ ಸುಲೈಮಾನ್ ಅವರನ್ನು ಕರೆದುಕೊಂಡು ಬಂದು ಮನೆಯಲ್ಲಿ ಕೆಲಸ ಮಾಡಿದ್ದರು. ಈ ವೇಳೆ ನೌಫಾಲ್ ಅವರ ತಮ್ಮ ಮಹಮ್ಮದ್ ನೌಷಾದ್ ಮನೆಯಲ್ಲಿದ್ದರೃಂದು ದೂರಿನಲ್ಲಿ ತಿಳಿಸಲಾಗಿದೆ.ಪರಿಶೀಲನೆ ನಡೆಸಿದಾಗ 32 ಗ್ರಾಂ ಮತ್ತು 26 ಗ್ರಾಂ ತೂಕದ ಎರಡು ಚಿನ್ನದ ಸರಗಳು, ಮಗುವಿನ ಚಿನ್ನದ ಸರ, ಕಾಲುಚೈನು, ಬ್ರಾಸ್ಲೈಟ್ ಸೇರಿದಂತೆ 15.82 ಲಕ್ಷ ರೂ. ಮೌಲ್ಯದ ಒಟ್ಟು 113 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.80 ಲಕ್ಷ ರೂಪಾಯಿ ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.
ಇದಲ್ಲದೆ ನೌಫಾಲ್ ಅವರ ತಾಯಿಯ 7 ಗ್ರಾಂ ತೂಕದ ಮೂರು ಉಂಗುರಗಳೂ ಕಾಣೆಯಾಗಿದೆ. ಕೆಲಸಕ್ಕೆ ಬಂದಿದ್ದ ಅಶ್ರಫ್, ಫಾರೂಕ್ ಹಾಗೂ ಸುಲೈಮಾನ್ ಅವರ ಮೇಲೆ ಅನುಮಾನವಿರುವುದಾಗಿ ನೌಫಾಲ್ ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ..




