(ನ್ಯೂಸ್ ಕಡಬ) newskadaba.com, ಸೆ.09. ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ಹೈಡ್ರಾಮಾ ಕೊನೆಗೂ ಅಂತ್ಯಗೊಂಡಿದ್ದು, ಸಿಐಡಿ ತನಿಖೆಯ ಮೂಲಕ 8 ತಿಂಗಳ ಬಳಿಕ ಪತ್ತೆಯಾಗಿದ್ದಾರೆ. ಕಳೆದ ಜನವರಿ 31ರಂದು ದ್ವಿತೀಯ ಪಿಯುಸಿಯ ತನಿಷ್ಕಾ ಮತ್ತು ಪ್ರಥಮ ಪಿಯುಸಿಯ ತೇಜಸ್ವಿನಿ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದರು.
ಸ್ಥಳೀಯ ಪೊಲೀಸರಿಗೆ ಸುಳಿವು ಸಿಗದ ಕಾರಣ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.ತನಿಖೆಯ ವೇಳೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಕ್ಕ ಸೆಲ್ಫಿ ಚಿತ್ರದ ಆಧಾರದ ಮೇಲೆ ಅಧಿಕಾರಿಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದರು.

ಬೆಟ್ಟದಲ್ಲಿದ್ದಾಗ ಪರಿಚಯವಾದ ಕನಕಪುರ ಮೂಲದ ಯುವಕನಿಗೆ ತಂದೆ-ತಾಯಿ ಇಲ್ಲವೆಂದು ಸುಳ್ಳು ಹೇಳಿ ಆತನೊಂದಿಗೆ ತೆರಳಿದ್ದರು. ನಂತರ ತನಿಷ್ಕಾ ಆ ಯುವಕನನ್ನು ವಿವಾಹವಾಗಿದ್ದಳು.ಹೊಸ ಸಿಮ್ ಕಾರ್ಡ್ ಖರೀದಿಸಲು ತನಿಷ್ಕಾ ತನ್ನ ಆಧಾರ್ ಕಾರ್ಡ್ ಬಳಸಿದಾಗ, ನೆಟ್ವರ್ಕ್ ಪ್ರೊವೈಡರ್ನಿಂದ ಸಿಐಡಿಗೆ ಬಂದ ಮಾಹಿತಿಯನ್ನಾಧರಿಸಿ ಇಬ್ಬರನ್ನೂ ವಶಕ್ಕೆ ಪಡೆಯಲಾಯಿತು.ಪತ್ತೆಯಾದ ಯುವತಿಯರನ್ನು ಸಿಐಡಿ ಅಧಿಕಾರಿಗಳು ಇಂದು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.




