(ನ್ಯೂಸ್ ಕಡಬ) newskadaba.com, ಸೆ. 09. ಕೆಲವೇ ಗಂಟೆಗಳ ಕಾಲಾವಧಿಯಲ್ಲಿ ಇಬ್ಬರು ವೃದ್ಧ ಸಹೋದರರು ಕುಸಿದು ಬಿದ್ದು ಮೃತಪಟ್ಟ ಮನಕಲುಕುವ ಘಟನೆಯೊಂದು ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಉಬ್ರಂಗಳದಲ್ಲಿ ನಡೆದಿದೆ.ಉಬ್ರಂಗಳ ನಿವಾಸಿಗಳಾದ ರಾಮಕೃಷ್ಣ ಭಟ್ (70) ಹಾಗೂ ಅವರ ಕಿರಿಯ ಸಹೋದರ ಕೇಶವ ಭಟ್ (65) ಮೃತಪಟ್ಟ ದುರ್ದೈವಿಗಳು.ಭಾನುವಾರ ಸಂಜೆ ರಾಮಕೃಷ್ಣ ಭಟ್ ಅವರು ಕೊಟ್ಟಿಗೆಗೆ ತೆರಳಿ ಜಾನುವಾರುಗಳಿಗೆ ನೀರು ನೀಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.
ಈ ವೇಳೆ ಮನೆಯೊಳಗೆ ಪೂಜೆ ಮುಗಿಸಿ ಹೊರಬಂದ ಕೇಶವ ಭಟ್ ಅವರಿಗೆ ಸಹೋದರ ಕುಸಿದು ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಅವರು ಸ್ಥಳೀಯರಿಗೆ ವಿಷಯ ತಿಳಿಸಿದ್ದು, ಸ್ಥಳೀಯರು ರಾಮಕೃಷ್ಣ ಭಟ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತುರ್ತು ವೈದ್ಯಕೀಯ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಣ್ಣನ ನಿಧನದ ವಾರ್ತೆ ಕೇಳಿ ತೀವ್ರ ಆಘಾತಕ್ಕೊಳಗಾದ ಕೇಶವ ಭಟ್ ಅವರು ಕೆಲವೇ ಗಂಟೆಗಳ ಬಳಿಕ ಮನೆಯಲ್ಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೂಡ ಮೃತಪಟ್ಟಿದ್ದಾರೆ.ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಸಹೋದರರು ಇಹಲೋಕ ತ್ಯಜಿಸಿರುವುದು ಉಬ್ರಂಗಳ ಗ್ರಾಮದಲ್ಲಿ ಹಾಗೂ ಕುಟುಂಬಸ್ಥರಲ್ಲಿ ತೀವ್ರ ಶೋಕ ಸಾಗರವನ್ನು ತಂದೊಡ್ಡಿದೆ.




