(ನ್ಯೂಸ್ ಕಡಬ) newskadaba.com, ಸೆ. 09. ಕಾರಾಗೃಹದೊಳಗೆ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಸಹ ಆರೋಪಿ ಪ್ರತಾಪ್ ಅವರನ್ನು ಬೆಂಗಳೂರಿನ ನ್ಯಾಯಾಲಯ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಆಗಸ್ಟ್ 11ರಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಪ್ರಜ್ವಲ್ ಬಳಿಯಿಂದ ನೀಲಿ ಬಣ್ಣದ ಸ್ಮಾರ್ಟ್ಫೋನ್ ವಶಪಡಿಸಿಕೊಳ್ಳಲಾಗಿತ್ತು.ಮೊಬೈಲ್ನಲ್ಲಿ ವಾಟ್ಸ್ಆ್ಯಪ್, ಫೇಸ್ಬುಕ್ ಸೇರಿದಂತೆ ಹಲವು ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಲಾಗಿತ್ತು. ಪ್ರಸ್ತುತ ಈ ಫೋನ್ ಅನ್ನು ಎಫ್ಎಸ್ಎಲ್ (FSL) ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಜ್ವಲ್ ಅವರು ಜೈಲಿನಿಂದಲೇ ತಮ್ಮ ಕುಟುಂಬದ ಸದಸ್ಯರು ಹಾಗೂ ವಕೀಲರೊಂದಿಗೆ ಸಂವಹನ ನಡೆಸುತ್ತಿದ್ದರು ಎನ್ನಲಾಗಿದ್ದು, ಈ ಮೊಬೈಲ್ಗೆ ಬಳಸಿದ್ದ ಸಿಮ್ ಕಾರ್ಡ್ ಆಂಧ್ರಪ್ರದೇಶದಿಂದ ಪಡೆದುಕೊಳ್ಳಲಾಗಿತ್ತು ಎಂಬ ಮಾಹಿತಿ ತಿಳಿದುಬಂದಿದೆ.ಮೊಬೈಲ್ ಜೈಲಿನೊಳಗೆ ತಲುಪಿದ್ದು ಹೇಗೆ ಮತ್ತು ಯಾರು ಪೂರೈಸಿದರು ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸಲು ಪೊಲೀಸರು ಇಬ್ಬರೂ ಆರೋಪಿಗಳನ್ನು ಪ್ರತ್ಯೇಕ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಲಿದ್ದಾರೆ.




