ತಿರುವಣ್ಣಾಮಲೈ ಅಣ್ಣಾಮಲೈಯರ್ ದೇವಾಲಯದಲ್ಲಿ ಸೆ.1 ರಿಂದ ಮೊಬೈಲ್ ಫೋನ್ ಸಂಪೂರ್ಣ ನಿಷೇಧ!



(ನ್ಯೂಸ್‌ ಕಡಬ) newskadaba.com,  ಆ.22: ತಮಿಳುನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುವಣ್ಣಾಮಲೈ ಅಣ್ಣಾಮಲೈಯರ್ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ದೇವಾಲಯ ಆಡಳಿತ ಮಂಡಳಿ ಮಹತ್ವದ ಸೂಚನೆ ನೀಡಿದೆ. ಸೆಪ್ಟೆಂಬರ್ 1ರಿಂದ ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದೆ.







ದೇವಾಲಯದ ಪಾವಿತ್ರ್ಯವನ್ನು ಕಾಪಾಡುವುದು ಹಾಗೂ ಗರ್ಭಗುಡಿ ಸೇರಿದಂತೆ ದೇವಾಲಯದೊಳಗೆ ಫೋಟೋ, ವಿಡಿಯೋ ಮತ್ತು ರೀಲ್ಸ್ ಚಿತ್ರೀಕರಣವನ್ನು ತಡೆಯುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ. ದರ್ಶನದ ಸಂದರ್ಭದಲ್ಲಿ ಭಕ್ತರು ಮೊಬೈಲ್ ಅಥವಾ ಕ್ಯಾಮೆರಾ ಬಳಸುವುದರಿಂದ ಸಮಯ ವ್ಯರ್ಥವಾಗುವುದರ ಜೊತೆಗೆ ಇತರ ಭಕ್ತರ ದರ್ಶನಕ್ಕೂ ಅಡ್ಡಿಯಾಗಬಹುದು. ಸೆಲೆಬ್ರಿಟಿಗಳು ಹಾಗೂ ವಿಐಪಿಗಳು ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲೂ ಫೋಟೋ ಮತ್ತು ವಿಡಿಯೋ ಚಿತ್ರೀಕರಣದ ಮೇಲೆ ನಿರ್ಬಂಧ ಇರಲಿದೆ. ವಿಐಪಿ ಭೇಟಿಯ ಮಾಹಿತಿ ಮುಂಚಿತವಾಗಿ ನೀಡುವಂತೆ ಸೂಚಿಸಲಾಗಿದೆ.






ಭಕ್ತರ ಅನುಕೂಲಕ್ಕಾಗಿ ದೇವಾಲಯದ ಪ್ರಮುಖ ಗೋಪುರಗಳ ಬಳಿ ವಿಶೇಷ ಮೊಬೈಲ್ ಭದ್ರತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ಭಕ್ತರು ಪ್ರತಿ ಮೊಬೈಲ್ ಫೋನ್‌ಗೆ ರೂ.5 ಶುಲ್ಕ ಪಾವತಿಸಿ ಟೋಕನ್ ಪಡೆದು ತಮ್ಮ ಫೋನ್ ಅನ್ನು ಭದ್ರತಾ ಕೇಂದ್ರದಲ್ಲಿ ಹಸ್ತಾಂತರಿಸಬಹುದು. ದರ್ಶನ ಮುಗಿದ ಬಳಿಕ ಟೋಕನ್ ತೋರಿಸಿ ಮೊಬೈಲ್‌ನ್ನು ಮರಳಿ ಪಡೆಯಬಹುದು.

ದೇವಾಲಯದ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ಇರಿಸಲಾಗುತ್ತದೆ. ನಿಷೇಧದ ನಡುವೆಯೂ ಮೊಬೈಲ್ ಫೋನ್‌ನ್ನು ದೇವಾಲಯದೊಳಗೆ ಕೊಂಡೊಯ್ದು ಬಳಸುವುದು ಕಂಡುಬಂದರೆ, ಫೋನ್‌ನ್ನು ವಶಪಡಿಸಿಕೊಂಡು ಪೊಲೀಸರಿಗೆ ಹಸ್ತಾಂತರಿಸಲಾಗುವುದು.. ಸೆಪ್ಟೆಂಬರ್ 1ರಿಂದ ಜಾರಿಯಾಗಲಿರುವ ಈ ಹೊಸ ನಿಯಮದಿಂದ ದೇವಾಲಯದ ಪಾವಿತ್ರ್ಯ ಹಾಗೂ ಶಿಸ್ತು ಕಾಪಾಡುವ ಜೊತೆಗೆ ಭಕ್ತರಿಗೆ ಸುಗಮ ದರ್ಶನಕ್ಕೆ ಅನುಕೂಲವಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

error: Content is protected !!
Scroll to Top