(ನ್ಯೂಸ್ ಕಡಬ) newskadaba.com, ಆ.14 : ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು 1 ವರ್ಷದ ಅವಧಿಗೆ ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಅಧಿಸೂಚನೆ ಹೊರಡಿಸಿದ್ದರು.
ಈ ನಿರ್ಧಾರಕ್ಕೆ ಕಾಂಗ್ರೆಸ್ ಶಾಸಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಿಷೇಧದಿಂದ ಏಳೆಂಟು ಜಿಲ್ಲೆಗಳ ಅಡಿಕೆ ಬೆಳೆಗಾರರ ಮೇಲೆ ತೀವ್ರ ಸೌಲಭ್ಯ/ಆರ್ಥಿಕ ಪರಿಣಾಮ ಬೀರಲಿದೆ ಎಂದು ಹಿರಿಯ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ತಮ್ಮ ಗಮನಕ್ಕೆ ತರದೆ ಈ ನಿರ್ಧಾರ ಕೈಗೊಂಡಿದ್ದಕ್ಕೆ ಆರೋಗ್ಯ ಇಲಾಖೆ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡ ಸಿಎಂ, ಗುಟ್ಕಾ ನಿಷೇಧ ಆದೇಶವನ್ನು ಶೀಘ್ರದಲ್ಲೇ ಹಿಂಪಡೆಯುವಂತೆ ಸೂಚಿಸಿದ್ದಾರೆ. ಈ ಕುರಿತು ಅಧಿಕೃತ ಆದೇಶ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ.





